ಬೇಲಿ ಮರೆಯಲಿ ಯಾರಿಗೂ ಕಾಣದೆ
ನಿಂತು ಬೀಳ್ಕೊಂಡಿತೊಂದು ಜೀವ

ದಿನಗಳು ಮುಗಿದುವೊ ತಿಂಗಳು ಉರುಳಿದುವೊ
ಒಂದರ ಮೇಲೊಂದು ವರ್‍ಷಗಳು ಸಾಗಿದುವೊ

ಆಶಾಢಗಳು ಬಂದು ಹಾದು ಹೋದುವೊ
ಶ್ರಾವಣಗಳು ಬಂದು ಕಳೆದು ಹೋದುವೊ

ದಸರೆ ದೀಪಾವಳಿಗಳು ಬಂದು ಇಣುಕಿ ಹೋದುವೊ
ಹೋಳಿ ಹುಣ್ಣಿಮೆಗಳು ಬಂದು ಕೆಣಕಿ ಹೋದುವೊ

ಕಣ್ಣಿನ ಕಾಂತಿ ಕುಂದಿ ಹೋಯಿತೊ
ದೇಹದ ಚೈತನ್ಯ ನಂದಿ ಹೋಯಿತೊ

ಕನಸೊಂದು ಸುಮ್ಮನೆ ಬಿದ್ದು ಹೋಯಿತೊ
ನೆನಪೊಂದು ತಾನೇ ಉಳಿದು ಹೋಯಿತೊ
*****