ಭವದುರ್ಗವಿಪಿನದೊಳು ಗಮ್ಯವರಿಯದೆ ತೊಳಲಿ
ಶ್ರಾಂತಿಯಿಂ ಭ್ರಾಂತಿಯಿಂ ಗತಿಗೆಟ್ಟು ಮತಿಗೆಟ್ಟು
ಮುಂತನರಿಯದೆ ನಿರಿಹಪರನಾಗಿ, ಅಂದಾರ್ತ
ಪ್ಲವಗವಾಹಿನಿ ವಿಂಧ್ಯಕಾನನದಿ ಬಳಿಗೆಟ್ಟು
ನಿರೀಹಮಾಗಿ ಋಕ್ಷ ಬಿಲಮುಖದಿ ನಿಂದವೊಲು,
ಧರ್ಮಗಹ್ವರ ಮುಖದಿ ಶಂಕಿಸುತ ನಿಂದಿರುವ
ಕರ್ಮ ಸಂದೇಹಿ, ಸಂಮೋಹಿತಾಂತಃಕರಣ,
ನಿರೀಶ್ವರನೆ, ಗವಿಯ ತಮಕಂಜಿ ಹಿಂಜರಿದು
ನಿಲಬೇಡ; ನೋಡೈ: ರಸಕ್ಲಿನ್ನ ಹಂಸಸಂ-
ಸೇವಿತಂ, ಸುಮನಆಮೋದ ನಿಷ್ಯಂದಿ, ಮೇ-
ಣಾನಿಷ್ಟಹೃಷ್ಟ ನಭಸಂಗಮಾರಾವಮೀ
ಬಿಲಮುಖಂ; ಇದರಂತರಾಳದೊಳಗಿರುವುದೈ
ನಿನ್ನ ತೃಷ್ಣೆಗಳೆಲ್ಲ ತಣಿವ ಜೀವನದ ನಚ್ಚು:
ನೆಚ್ಚಿ ಹೊಗು, ಕಾವಲಿಹ ಕಾವಳಕೆ ಕಣ್ಣ ಮುಚ್ಚು.
*****


















