ಎಂಥ ಗಾಳಿ ಎಷ್ಟೊಂದು ಗಾಳಿ
ಬೆಟ್ಟದ ಮೇಲಿಂದ ಬೀಸ್ಯಾವೆ ಗಾಳಿ
ಬಯಲ ಮೇಲಿಂದ ಬೀಗ್ಯಾವ ಗಾಳಿ

ಎತ್ತರದ ಗಾಳಿ ಉತ್ತರದ ಗಾಳಿ
ಉತ್ತರ ಧ್ರುವದಿಂದ ನಿರುತ್ತರ ಗಾಳಿ
ಗುಡುಗು ಮಿಂಚುಗಳ ಮುಟ್ಟಿದ ಗಾಳಿ
ಸಾಗರದಲೆಗಳ ಅಟ್ಟಿದ ಗಾಳಿ

ಸುಳಿಸುಳಿವ ಗಾಳಿ ಸುಳಿಯದ ಗಾಳಿ
ತಾಳೆ ಬಾಳೆಗಳ ಗಲಗಲ ಗಾಳಿ
ಹೊಲದ ಮೇಲಿಂದ ತಣ್ಣನೆ ಗಾಳಿ
ಮರಳ ಮೇಲಿಂದ ಒಣಗಿದ ಗಾಳಿ

ಮಾಗಿಯ ಚಳಿಗಾಳಿ ಬೇಸಿಗೆಯ ಬಿಸಿಗಾಳಿ
ಕೊಳದ ಕುಳಿರ್‍ಗಾಳಿ ನಿಟ್ಟುಸಿರ ನಿಡುಗಾಳಿ
ಗುಂಗುರು ಕೂದಲ ಉಂಗುರ ಗಾಳಿ
ಅಂಗನೆಯರ ಶೃಂಗಾರ ಗಾಳಿ
*****