ತಣ್ಣನೆಯ ಆಕಾಶ, ಚಂದಿರ
ಸುತ್ತಲೂ ಹಕ್ಕಿಗಳ ಇಂಚರ
ನಗುವ ಹೂ, ಬಳ್ಳಿ, ಮರ ಸಂಕುಲ
ನಡುವೆ ಬದುಕುತ್ತಿರುವ ಮನುಕುಲ

ಈ ಲೋಕ ಎಷ್ಟೊಂದು ಸುಂದರ !
ಓ ಅಕ್ಕ, ಓ ಅಣ್ಣ ಕಂಡಿರ ?

ಕೊಲ್ವ ಭಾಷೆಗಳನ್ನ ಬಿಟ್ಟುಕೊಟ್ಟು
ಎಲ್ಲ ಕ್ಷುದ್ರತೆಯಿಂದ ನಿನ್ನನೆತ್ತು
ಈ ರೀತಿ ನಾವೆಲ್ಲ ಬದುಕಿದಾಗ
ವಾಸಿಯಾದೀತಲ್ಲ ಹಳೆಯ ರೋಗ-

ಈ ಲೋಕ ಎಷ್ಟೊಂದು ಸುಂದರ !
ಆದೀತು-ಓ ಗೆಳೆಯ- ಬಲ್ಲೆಯ ?

ಮನುಕುಲದ ನಿನ್ನೆಗಳು ಸಾಯಬೇಕು
ನಾಳೆ-ನಾಳೆ ಬೆಳಿಗ್ಗೆ-ಕಾಯಬೇಕು
ಈ ದಿನದ ಈ ಕ್ಷಣದ ಬದುಕಿಗೆ
ಹೊಸ ಅರ್ಥ, ಲವಲವಿಕೆ ಬಂದರೆ

ಈ ಲೋಕ ಎಷ್ಟೊಂದು ಸುಂದರ !
ನಕ್ಕಂತೆ ಈ ಕ್ಷಣದ ಚಂದಿರ,

ಎಲ್ಲ ಅಪೇಕ್ಷೆ, ನಿರೀಕ್ಷೆ ಬಿಟ್ಟುಕೊಡುವೆ
ನೋವು ಹತಾಶೆಗೆ ಸಾವು ಕೊಟ್ಟುಬಿಡುವೆ
ಬರೆದಂತೆ ಬದುಕುವುದೂ ಸಾಧ್ಯವಾದಾಗ
ಕಳೆದಾಗ ಆತಂಕ, ಭೀತಿ, ಉದ್ವೇಗ

ಈ ಲೋಕ ಎಷ್ಟೊಂದು ಸುಂದರ-
ಈ ಬದುಕೂ ಸಹ ಅಷ್ಟೇ ಸುಂದರ.
*****