ಪ್ರಜಾ ರಾಜ್ಯದ ಅಣಕಾಟ ನೋಡಿರಿ ಜನರ ತಿಣುಕಾಟ   ||ಪ||
ಪ್ರಜೆಗಳ ರಾಜ್ಯವು ಪ್ರಜೆಗಳಿಗಾಗಿಯೆ
ಪ್ರಜೆಗಳಿಂದಲೇ ನಡೆಯಲು ಬೇಕು
ಪ್ರಜೆಗಳ ಹೆಸರಲಿ ಕೊಬ್ಬುವ ಜನರನು
ಯಾವ ರೀತಿಯಲಿ ಕೊಲಬೇಕು ||೧||

ಓಟಿನ ಮುಂಚಿನ ಸೋಗು ನೋಡಿರೋ
ನಮ್ಮನೆ ನಾಯಿಯ ಪರಿಯಂತೆ
ಓಟು ನೋಟು ಕೈ ಬದಲಿಯ ನಂತರ
ನಾವೇ ಅವರಿಗೆ ನಾಯಂತೆ ||೨||

ದೇಶದ ತುಂಬಾ ಬಡವರೆ ಪ್ರಜೆಗಳು
ಒಬ್ಬ ಬಡ ಮಂತ್ರಿಯ ತೋರಿಸಿರಿ
ಹಣ ಹಣ ಝಣ ಝಣ ಹಣವೆ ಆಳುವುದು
ಪ್ರಜಾರಾಜ್ಯ ಶೋಷಣೆಯ ಪರಿ ||೩||

ನಮ್ಮ ದೇಶವನು ನಾವಾಳುವೆವೋ
ಕನಸು ಕಾಣುವಿಯ ಹುಚ್ಚಣ್ಣ
ಫ್ಯಾಕ್ಟರಿ ಒಡೆಯರು ಕಂತ್ರಾಟದಾರರು
ಸೇಟು ಜಮೀನ್ದಾರರ ವಶವಣ್ಣಾ ||೪||

ನಿನ್ನದೆ ರಾಜ್ಯವು ಆಗಿದ್ದರೆ ನೀ
ಕಛೇರಿ ಕಛೇರಿ ಅಲೆದೀಯಾ
ಆಫೀಸ್ ಗುಮಾಸ್ತ ಗದರಿಸಿ ಬಯ್ದರೆ
ಕೆಮ್ಮಗೆ ಲಂಚವ ತೆತ್ತೀಯಾ ||೫||

ಡಾಕ್ಟರಾಗುವರು ಎಂಜಿನೀಯರೂ
ಆಫೀಸರುಗಳು ಉಳ್ಳವರು
ಧನಿಕ ಶಾಸಕರು ತಂತಮ್ಮಂದಿಗೆ
ತುಂಬುವರೆಲ್ಲಿ ನಿನ್ನವರು ||೬||

ತಾಸೀಲ್ದಾರರು ಜಿಲ್ಲಾಧಿಕಾರಿಯು
ಪಂಚಾತಿ ಮುನಿಸೀಪಾಲಿಟಿಯು
ಪೊಲೀಸ್ ಕೋರ್ಟು ಎಲ್ಲ ಖಾತೆಗಳು
ದಣಿಗಳ ಸೇವಾ ಪಾರಿಟಿಯು ||೭||

ಅನ್ನ ಕೊಡುವವನೆ ಎಲ್ಲ ದುಡಿಯುವನೆ
ದೇಶವ ಕಟ್ಟುವ ಎಲೆ ಬಡವ
ನಿನ್ನದು ದೇಶ ನಿಜವಾದೊಡೆಯನೆ
ಮಬ್ಬನು ಕೊಡವು ಏಳ್ ಬಡವ ||೮||

೧೮-೫-೮೬
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)