ಅಡ್ಡಡ್ಡಲ್ಲ ಉದ್ದುದ್ದಾಗಿ
ತಲೆ ಅಲುಗಾಡಿಸುತ್ತಲೇ ಇರಬೇಕು
ನಿಲ್ಲಿಸಿದರೆ ಬಂತು ಬೆತ್ತ.
‘ಪಾಪ! ಇವಳೆಷ್ಟು ಮುಗ್ಧೆ’ ಹಾಗೇಽ ಇರಬೇಕು
ಮಾತನಾಡಿದರೆ ಮುರಿದುಬೀಳುತ್ತವೆ ಹಲ್ಲು.
ಕಣ್ಣಿಗೆ ರೆಪ್ಪೆ ಬಂದಂತೆ ನಟಿಸಬೇಕು
ವರ್‍ಣಿಸಿದರೆ ಬಾಸುಂಡೆಗಳು.
ಇವನೊಬ್ಬನ ಮಾತುಗಳೇ ವೇದವಾಕ್ಯಗಳು
ಬೇರೆಯವರವು ಚಿಲ್ಲರೆ ತುಕ್ಕುಹಿಡಿದವು.
ಹಸಿದ ಹುಲಿಗೆ ಮೊದಲು ತಟ್ಟೆ
ಇಡದಿರೆ ಇಡಿಯಾಗಿ ತಿನಬಹುದು ಅವಳನ್ನೇ.
ಅವಳು ಪ್ರೇಮದ ಹಸಿರು ನಿರೀಕ್ಷಿಸಿದ್ದಾದರೆ
ಕಾಮಿ ಎಂದು ಕೊಳ್ಳೆ ಇಟ್ಟು
ಕಪಾಳಮೋಕ್ಷ ಎದುರಾದೀತು.
ಮಾತು ಮಾತಿಗೆ ಸಂಶಯ ಪಿಶಾಚಿ
ಹೊರಗೆ ಸತ್ಯಹರಿಶ್ಚಂದ್ರ, ಧರ್ಮರಾಯ,
ಮಾತುಮಾತುಗಳಲಿ ಮದ್ದು ಗುಂಡುಗಳ ಸಿಡಿಸುವಿಕೆ
ನರನಾಡಿಗಳಲಿ ಬಂದೂಕು ಹೊತ್ತ
ವಸಾಹತುವೇ ತೊಲಗಿಲ್ಲಿಂದ-
ಇಲ್ಲದಿರೆ ಸಿಡಿದೇಳುವುದು ಗೊತ್ತು
ಗಾಂಧಿ ತಾತನ ಮಂತ್ರ ‘ಮಾಡು ಇಲ್ಲವೆ ಮಡಿ’.
*****