ಅಂದೊಮ್ಮೆ
ನೋಡಬಯಸಿದ್ದು ಧೂಮಕೇತುವನ್ನು
ನೋಡಿದ್ದು ಚಂದ್ರೋದಯದ ಸೊಬಗನ್ನು.
ಸೂರ್ಯಾಸ್ತದ ನವರಂಗಿನ ಚೆಲ್ಲಾಟವೊಂದೆಡೆ
ಚಂದ್ರೋದಯದ ಮನಮೋಹಕತೆ ಇನ್ನೊಂದೆಡೆ.
ಮೋಡಗಳ ಮರೆಯಿಂದ ಚಂದಿರನ ಇಣುಕಾಟ
ಸೂರ್ಯಚಂದ್ರರ ಕಣ್ಣುಮುಚ್ಚಾಲೆಯಾಟ!
ನಡುವೆ ಬಂಗಾರದ ಎಳೆಗಳ ನರ್ತನದಾಟ.
ಗುಡುಗಿಲ್ಲ ಮಿಂಚಿಲ್ಲ, ಮಳೆಯ ದಿನಗಳಲ್ಲ
ಮೇಲೆ ಶುಭ್ರ ಆಕಾಶ,
ಕೆಳಗೆ ವಿದ್ಯುತ್‌ದೀಪಗಳ ಸಾಲು;
ಒಂದಲ್ಲ, ಎರಡಲ್ಲ, ನಾಲ್ಕಾರು ಬಾರಿ
ಮಿಂಚಿತ್ತು ಬಂಗಾರದ ಗೆರೆಗಳು
ಆಗಸದಿಂದ ನಮ್ಮೆಡೆಗೆ
ಹೊಂಬಣ್ಣದ ಗೆರೆಗಳ ಎಳೆದವರ್ಯಾರು?
ಸೂರ್ಯ ಚಂದಿರರ ನಡುವೆ
ಚಿತ್ತಾರ ಬಿಡಿಸಿದವರ್ಯಾರು?
ಸೃಷ್ಟಿಯ ವೈಚಿತ್ರ್ಯ!
ಆಗಸದಲ್ಲೆಷ್ಟು ಚಿತ್ತಾರಗಳು ಮೂಡುವವೋ
ಅದ ನೋಡಲು ನಮಗಿಲ್ಲ ಸಮಯ.
ಕಣ್ಣಿದ್ದೂ ನೋಡಲಾಗದ ಕುರುಡುತನದಲಿ
ನಾವು ಕಳಕೊಂಡ ನೋಟಗಳೆಷ್ಟೋ?
ಮರಳಿ ಪಡೆಯಬಲ್ಲೆವೇ
ಕಳೆದುಕೊಂಡ ದೃಶ್ಯಗಳ?
ಮರಳಿ ಸಿಗುವುದೇ ಜಾರಿ ಹೋದ ಸಮಯ?
*****