ಅಯ್ಯೋ, ಕಂಡಲ್ಲೆಲ್ಲ ಅಲೆದೆ, ಮಂದಿಯ ಮುಂದೆ
ಕೋಡಂಗಿ ವೇಷದಲಿ ಕುಣಿದೆ ಒಳಗನ್ನಿರಿದೆ,
ಹೊನ್ನನೆ ಹರಾಜು ಹಾಕಿದೆ ಹತ್ತು ಪೈಸಕ್ಕೆ,
ಹಲುಬಿ ಹೊಸ ಸ್ನೇಹಕ್ಕೆ ಹಳೆಯದರ ಮುಖ ಮುರಿದೆ.
ಸತ್ಯಕ್ಕೆ ಸೊಪ್ಪು ಹಾಕದೆ ಸೊಟ್ಟ ನಡೆದದ್ದು
ನುಡಿದದ್ದು ಸುಳ್ಳಲ್ಲ ಆದರೂ ಈ ಎಲ್ಲ
ಎದೆಯಲ್ಲಿ ಯೌವನದ ಹೊಸ ಕಿಚ್ಚು ಹಚ್ಚಿದ್ದು
ನಿಜ. ಕೆಟ್ಟು ಕಡೆಗರಿತೆ ನಿನ್ನೊಲವಿಗೆಣೆಯಿಲ್ಲ.
ಎಲ್ಲ ಮುಗಿಯಿತು, ಅಸ್ತು ಎನ್ನು ಉಳಿದದ್ದನ್ನು,
ಮತ್ತೆ ಎಂದೆಂದೂ ನಡೆಯದು ತಪ್ಪು ನನ್ನಿಂದ ;
ನನ್ನೊಲವಿನಧಿದೈವವನ್ನು, ಹಳೆಕೆಳೆಯನ್ನು
ಕೆಣಕುವವನಲ್ಲ ಹೊಸ ಹೊಸ ಅಳತೆಗೋಲಿಂದ.
ಪ್ರೀತಿ ತುಳುಕುವ ನಿನ್ನ ಹೃದಯ ಸಮ ಸ್ವರ್‍ಗಕ್ಕೆ,
ನನಗಿರಲಿ ಸ್ವಾಗತ ಅಂಥ ಹೃದಯದೊಳಕ್ಕೆ;
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 110
Alsa, `tis true I have gone here and there