ಬೆನ್ನು ಬಾಗಿಸಿಕೊಂಡು ತಂದುದನ್ನು
ಅಟ್ಟುಕೊಂಡು ಉಟ್ಟುಕೊಂಡು
ಪಾಡು ಪಟ್ಟುಕೊಂಡು
ಜೀ ಹುಜೂರ್ ಹಾಡಿಕೊಂಡು
ಉಸಿರು ಬಿಡಲು
ಅಪಣೆ ಬೇಡಿಕೊಂಡು
ಕೀ ಕೊಟ್ಟ ಗೊಂಬೆಗಳಂತೆ
ಕುಣಿಯುವವರು ನಾವು
ಕುಣಿಸುವವರು ನೀವು.
ನಿಮ್ಮ ಪಾದಕ್ಕೆ ಮೂಗುದಾರಕ್ಕೆ
ಮಣಿದು ತಾಳಕ್ಕೆ ಕುಣಿದು
ಇಷ್ಟಾನಿಷ್ಟಗಳ ಒರೆಹಚ್ಚಿ
ನಿಮ್ಮ ಭಾಗ್ಯದ ಪ್ರಗತಿಗೆ
ಹಿರಿಮೆಗೆ ಗರಿಮೆಗೆ
ಕುಲದ ಉದ್ಧಾರಕ್ಕೆ
ಬೇಡುವವರು ನಾವು
ಬೇಡಿಸುವವರು ನೀವು.
ಕಾಲನ ಪರಿಧಿಯೊಳಗೆ ಏಳುತ್ತಾ
ಬೀಳುತ್ತಾ ಕನಸುಗಳ ಕತ್ತರಿಸುತ್ತಾ
ಬವಣೆಗಳಲ್ಲೇ ಸುಖವನ್ನರಸುತ್ತಾ
ನೋವಿನಲ್ಲೂ ನಗುವ ಕಾಣುತ್ತಾ
ಹಣೆಬರಹವ ಹಳಿಯುತ್ತಾ
ನಿಂತ ನೀರಾಗಿ ನೀರಲ್ಲೇ ಕರಗಿ
ಕೊಳೆಯುವವರು ನಾವು
ಕೊಳೆಯಿಸುವವರು ನೀವು.
ಆರಕ್ಕೇರದೆ ಮೂರಕ್ಕಿಳಿಯದೆ
ಇತ್ತಲೂ ಇಲ್ಲದೇ ಅತ್ತಲೂ ಸಲ್ಲದೇ
ಹಳೆಯದನ್ನು ಬಿಡಲಾಗದೆ
ಹೊಸದನ್ನು ಅಪ್ಪಿಕೊಳ್ಳದೆ
ದ್ವಂದ್ವದಲಿ ಸೆಣಸುತ್ತಾ
ಬದಲಾದರೂ ಕಾಲ ದೇಶ ಸಂಸ್ಕೃತಿ
ಬದಲಾಗದವರು ನಾವು
ಬದಲಾಗಿಸದವರು ನೀವು.
*****