ಯಾವುದೇ ಪಯಣ
ಗೊತ್ತಿಲ್ಲ ಗುರಿಯಿಲ್ಲ
ಆದಿಯೆಲ್ಲಿ? ಅಂತ್ಯವೆಲ್ಲಿ?
ಸಾಗಿದೆ ತಿಳಿಯಲಾಗದ
ಲೋಕಕೆ, ಮಾಯಾಲೋಕಕೆ
ಬದುಕಿದು ಬರೀ ಬೆರಗು
ಕಣ್ಣು ಕಟ್ಟು ಆಟದ ಮೆರಗು
ಅರಿತವರಿಲ್ಲ ಸೃಷ್ಟಿಯ ಮೂಲ
ನದೀ ಮೂಲ ಋಷಿ ಮೂಲ
ಹಾಗೆಯೇ ದೇವ ಮೂಲ.
ಹತ್ತುವರು ಇಳಿಯುವರು
ಪಯಣದಲಿ ಜೊತೆಯಾಗುವರು
ಸಂಬಂಧಗಳ ಬೆಸೆಯುವರು
ಸ್ನೇಹಪ್ರೀತಿ ಮೋಹ ಮಮಕಾರ
ಬಿಡಿಸಲಾಗದ ಭಾವಗಳ ಮಹಾಪೂರ.
ಎತ್ತ ಒಯ್ಯುತಿದೆ ಪಯಣಿಗರನೆಲ್ಲ
ಇಳಿದವರು ಮತ್ತೆ ಹತ್ತಲಿಲ್ಲ
ಎಲ್ಲಿ ಹೋದರು? ಎತ್ತ ಹೋದರು?
ಮಿಂಚಿನಂತೆ ಸುಳಿದು ಮಾಯ
ಯಾವುದದು ಹೊಸ ಲೋಕ
ನಾಕವೋ ನರಕ
ಒಬ್ಬರಾದರೂ ಬಂದು ಹೇಳಲಿಲ್ಲ.
ನಿರೀಕ್ಷೆಯಲಿ ಸಾಗುತಿದೆ ಜಗವೆಲ್ಲ.
*****