ಉರಿಯುತ್ತಿದೆ ಬೆಂಕಿ
ಧಗಧಗ
ಕೆನ್ನಾಲಿಗೆಯ ಚಾಚಿ
ಭಗ ಭಗ
ಮುಗಿಲೆತ್ತರ ವ್ಯಾಪಿಸಿ
ಆಕ್ರಮಿಸುತ್ತಿದೆ ಉದ್ದಗಲ
ನೋಡಲೆಷ್ಟು ಚೆನ್ನ
ಸಪ್ತ ವರ್ಣಗಳ ನರ್ತನ
ಕಣ್ತುಂಬಿಸಿ ಮನ ತುಂಬಿಸಿ
ಆನಂದಿಸುವ ಪರಿ
ಕೇಕೆ ಹಾಕಿದ ಕೂಗಿಗೆ
ಮುಗಿಲಲ್ಲಿ ಪ್ರತಿಧ್ವನಿ
ಒಬ್ಬರಿಗಾದರೂ ಇಲ್ಲ ಬೆಂಕಿ
ಆರಿಸುವ ಎದೆಗಾರಿಕೆ.
ಉರಿವ ಬೆಂಕಿಗೆ ತುಪ್ಪ
ಸುರಿದು ಮೈ ಕಾಯಿಸುವ ಉನ್ಮಾದ
ಬೆಂಕಿ ಹತ್ತಿದಾದರೂ ಹೇಗೆ?
ಯಾರು ಹೊತ್ತಿಸಿದರೋ
ಯಾಕೆ ಹತ್ತಿಸಿದರೋ
ಅರಿಯುವುದಾದರೂ ಎಲ್ಲಿ?
ಋಷಿ ಮೂಲ, ನದಿ ಮೂಲ
ಬೆಂಕಿಯ ಮೂಲ
ಅರಿಯದಿರುವುದೇ ಜಾಣತನ.
*****