ಕೋಳಿ ಕೂಗೋದು ಕಾದು
ಬಾಳ ತಂಗಳು ತಿಂದು
ಹೊತ್ತಿನ ಜತ್ಯಾಗೆ ಹೊಲದಾಕೆ ಬಂದು
ಬಿತ್ತಿದ್ದು ಒಣ ನವಣೆ
ಬೆಳೆದದ್ದು ಬರೀ ಬವಣೆ.


ಹಾರಕ ತಂದು ನೆಲತುಂಬ ಹೊಯ್ದರೂ
ಸುರಕೊಂಡಿದ್ದು ಮಾತ್ರ ಹತ್ತಾರು ಸೇರು
ತಿಂದು ಕುಂತರೆ ಈಗ
ಮುಂದೆ ಬೀಜಕ್ಕೆ ಕಾಳಿಲ್ಲ
ಹೊಟ್ಟೆ ಕಟ್ಟಿದರೂ ಹಾರಕಕ್ಕೆ ಬೆಲೆಯಿಲ್ಲ.


ಕಡಲೆ ಕಾಯಿಯ ಬೀಜ
ಒಣ ಹೂಲದ ರಾಜ
ಬಿತ್ತಿ, ಬೆಳೆಯಿತು ಆಸೆ.

ಹರಡಿಕೊಂಡು ಗಿಡ
ನೂರು ಬೇರಿನ ಬುಡ
ರೆಪ್ಪೆಯಂಚಿನ ಒಳಗೆ
ಬಿರಿದ ಕಮಲ
ಕಣ್ಣು ತೆರೆದರೆ ಅಲ್ಲಿ
ಉರಿಗಣ್ಣ ಸೂರ್ಯನಿಗೆ
ಸೀದು ಹೋದ ಹಸಿರು
ಹೊಲವೆಲ್ಲ ನಿಟ್ಟುಸಿರು.


ರಾಗಿ ಪೈರಿನ ಬೆಳಸು
ತೂಗಿ ತೊನೆಯುವ ತೆನೆ
ಎದೆಯಾಗೆ ಮೂಡಿದವು
ರಾಶಿರಾಶಿ ಮುದ್ದೆ.

ಕುಣಿದು ಕುಪ್ಪಳಿಸಿ
ಕೈ ಚಾಚಿದರೆ
ಬಂಧನದ ಬೇಡಿ
ತೆನೆ ರುಂಡ ತಂದು
ಒಂದರ ಹಿಂದೊಂದು
ತುಂಬಿದ ಗಾಡಿ.


ಭತ್ತ ಬೆಳೆಯೋಣೆಂದರೆ
ಬಾವಿಯಿಲ್ಲ
ಕೆರೆಯ ಹಿಂದುಗಡೆ
ಗದ್ದೆಯಿಲ್ಲ.

ಅಕ್ಕಿ ಹಕ್ಕಿಯ ರೆಕ್ಕೆ
ಸುಟ್ಟು ಬಿದ್ದಿತು ನೆಲಕೆ
ಅನ್ನ ತಿನ್ನುವ ಆಸೆ
ಬಂಜೆ ಬಯಕೆ.


ನವಣೆ ಹಾರಕವಿಲ್ಲ
ಕಡಲೆಕಾಯಿ ಬೀಜವಿಲ್ಲ
ಅಕ್ಕಿ ರಾಗಿಯ ಹೆಸರು
ಎತ್ತೊ ಹಂಗಿಲ್ಲ.

ಕಂಡೂರ ಹೊಲದಾಗೆ
ಕೂಲಿ ಮಾಡಿದರುಂಟು
ಎತ್ತು ನೇಗಿಲಿಗೆಲ್ಲ
ಬಾಡಿಗೆ ನಂಟು.

ನೋವು ತುಂಬಿದ ನಾನು
ಏನ ಪ್ರೀತಿಸಲಿನ್ನು
ನೆಲವೂ ಇಲ್ಲ, ನೇಗಿಲೂ ಇಲ್ಲ.
*****