ನಿಸಾರ್ ಅಹಮದ್‌ ಅವರ ಕೆಲವು ಕವಿತೆಗಳು

ನಿಸಾರ್ ಅಹಮದ್‌ ಅವರ ಕೆಲವು ಕವಿತೆಗಳು

ನವೋದಯದಲ್ಲೇ ಪ್ರಾರಂಭಿಸಿ ನಮ್ಮ ನವ್ಯೋತ್ತರ ಕಾವ್ಯಮಾರ್ಗಗಳನ್ನೂ ಹಾದು ಬಂದ ನಿಸಾರ್ ಅಹಮದ್ರ ಕಾವ್ಯ ಕೃಷಿ ಮೂವತ್ತೈದು ವರ್ಷಗಳಿಗಿಂತ ಹೆಚ್ಚಿನದು. ಕನ್ನಡ ಕಾವ್ಯಕ್ಕೆ ಲವಲವಿಕೆ, ಅನುಭವ ವೈವಿಧ್ಯ, ಪ್ರಯೋಗಶೀಲತೆ, ಮಾತುಗಾರಿಕೆಯ ರೋಚಕತೆಗಳನ್ನು ರೂಢಿಸುತ್ತಾ ಬಂದ ನಿಸಾರರು ಆಧುನಿಕ ಕನ್ನಡ ಸಾಹಿತ್ಯದಲ್ಲಿಯೇ ಒಂದು ವಿಶಿಷ್ಟ ಪ್ರತಿಭೆ. ಜನಪ್ರಿಯತೆ ಶ್ರೇಷ್ಠತೆ ಎರಡೂ ಒಟೊಟ್ಟಿಗೇ ಸಾಗಲಾರವು ಎಂಬ ಮಾತಿಗೆ ನಿಸಾರರು ಅಪವಾದವಾಗಿದ್ದಾರೆ. ಸರ್ಕಾರಿ ವಿಜ್ಞಾನ ಕಾಲೇಜಿನ ಭೂಗರ್ಭ ಶಾಸ್ತ್ರದ ಅಧ್ಯಾಪಕರೂ, ಭಾಷೆಯ ದೃಷ್ಟಿಯಿಂದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರೂ ಆದ ನಿಸಾರರು ಕನ್ನಡ ಭಾಷೆಯ ಮೇಲೆ ಹೊಂದಿರುವ ಪ್ರಭುತ್ವ ಅಚ್ಚರಿಗೊಳಿಸುವಂಥದಾಗಿದೆ. ಕವಿ ಮಾತ್ರ ವಲ್ಲದೇ ವಿಮರ್ಶಕರಾಗಿಯೂ, ವೈಚಾರಿಕ ಗದ್ಯ ಬರಹಗಾರರಾಗಿಯೂ ತಮ್ಮ ಛಾಪು ಮೂಡಿಸಿರುವ ಅವರ ಕಾವ್ಯದ ಕೆಲವು ಮಗ್ಗುಲುಗಳನ್ನು ಮಾತ್ರ ಸ್ಪರ್ಶಿಸುವ ಆಶಯ ಈ ಪ್ರಬಂಧದ್ದಾಗಿದೆ.

“ಮನಸು ಗಾಂಧಿ ಬಜಾರು”, “ನೆನೆದವರ ಮನದಲ್ಲಿ”, “ಸುಮುಹೂರ್ತ”, “ಸಂಜೆ ಐದರ ಮಳೆ”, “ನಾನೆಂಬ ಪರಕೀಯ”, “ಸ್ವಯಂ ಸೇವೆಯ ಗಿಳಿಗಳು”, “ನಿತ್ಯೋತ್ಸವ”, “ಅನಾಮಿಕ ಆಂಗ್ಲರು”, “ಬಹಿರಂತರ”, “ನವೋಲ್ಲಾಸ”, “ಆಕಾಶಕ್ಕೆ ಸರಹದ್ದುಗಳಿಲ್ಲ”, “ಅರವತೈದರ ಐಸಿರಿ” – ಈ ಸಂಕಲನಗಳಲ್ಲಿ ಮಡುಗಟ್ಟಿದ ಅವರ ಕವಿತೆಗಳು ಪ್ರಾತಿನಿಧಿಕ ಕವನಸಂಕಲನ, ಆಯ್ದ ಕವಿತೆಗಳು ಮತ್ತು ಸಮಗ್ರ ಕಾವ್ಯದಲ್ಲಿ ಸಂಗ್ರಹವಾಗಿವೆ. ಇವಲ್ಲದೇ, “ಅಚ್ಚುಮೆಚ್ಚು”, “ಮನದೊಂದಿಗೆ ಮಾತುಕತೆ” ಮೊದಲಾದ ಗದ್ಯ ಬರಹಗಳು, “ಬರೀ ಮರ್ಯಾದಸ್ಥರೇ”, “ಒಥೆಲೋ” ಮೊದಲಾದ ಅನುವಾದಗಳು, “ಚಿಂತನ”, “ಅವಲೋಕನ”, “ರತ್ನ ಸಂಪುಟ” ಮೊದಲಾದ ಸಂಪಾದಿತ ಗ್ರಂಥಗಳು ಅವರ ಕೊಡುಗೆಗಳಾಗಿವೆ.

ಒಂದು ಸಂಕಲನದಿಂದ ಇನ್ನೊಂದು ಸಂಕಲನಕ್ಕೆ ಬೆಳೆಯುತ್ತಾ ಬಂದಿರುವ ನಿಸಾರರು ತಮ್ಮ ವಿಭಿನ್ನ ಸಂಸ್ಕೃತಿಯ ಉತ್ಕಟ ಅರಿವು, ವೈಜ್ಞಾನಿಕ ದೃಷ್ಟಿಕೋನ, ತೀವ್ರ ಅನುಭವ ಜನ್ಯ ನೈಜ ಸುಭಗ ಸಂವಹನದಿಂದ ಕನ್ನಡದ ಇತರ ಕವಿಗಳಿಂದ ಬೇರೆಯಾಗಿ ನಿಲ್ಲುತ್ತಾರೆ. ಹಾಗಾಗಿಯೇ ಅವರನ್ನು ನವೋದಯ ಪಂಥಕ್ಕಾಗಲೀ, ನವ್ಯ ಮಾರ್ಗಕ್ಕಾಗಲೀ ಸೇರಿಸಿ ಕೈತೊಳೆದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಕನ್ನಡ ಕಾವ್ಯದಲ್ಲಿ ಮುಕ್ತ ಛಂದದ ಅತಿಯಾದ ಬಳಕೆಯ ಫಲಿತವಾಗಿರುವ ಏಕತಾನತೆಯನ್ನು ನೀಗಿಸಿ ಲವಲವಿಕೆ ಮತ್ತು ಗೇಯ ವೈವಿಧ್ಯದ ಹಲವು ಅಪೂರ್ವ ಪ್ರಯೋಗಗಳನ್ನು ಮಾಡಿ, ನವೋದಯ ನವ್ಯ ಸಂಪ್ರದಾಯಗಳಿಗೆ ಅನನ್ಯ ಧಾತುಗಳನ್ನು ಕೂಡಿಸಿದವರು ಅವರು. ಆದ್ದರಿಂದ ಪ್ರಾಸ, ಛಂದಸ್ಸು, ಲಯಗಳಲ್ಲಿ ನವೋದಯಕ್ಕೆ ಸೇರುತ್ತಲೇ ಅಂತಸ್ಸತ್ವದಲ್ಲಿ ನವ್ಯಕ್ಕೆ ಸೇರುವ ಅನೇಕ ಕವಿತೆಗಳನ್ನು ಅವರು ರಚಿಸಿದ್ದಾರೆ. ಅಂತಹ ಐದು ಕವಿತೆಗಳನ್ನು ತೆಗೆದುಕೊಂಡು ಪ್ರಾಯೋಗಿಕ ವಿಮರ್ಶೆಗೊಳಪಡಿಸುವ ನಮ್ಮ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

“ನಿಸಾರರ ಗೀತಗಳಲ್ಲಿ ವಸ್ತು ಸಮೃದ್ಧಿಯ ಜೊತೆಗೆ ಸಂವೇದನಾಶೀಲತೆ, ಮಾತುಗಾರಿಕೆಯ ಮೋಹಕತೆ ಮತ್ತು ಸಂವಹನದ ಸುಭಗತೆಗಳು ಒಡಮೂಡಿ ಉತ್ಕಟ ಹೃದಯಾನುಭೂತಿಗೆ ಅವಕಾಶ ಮಾಡಿಕೊಡುತ್ತವೆ” ಎಂಬ ಮಾತಿಗೆ ಅವರ “ನಗ್ತೀರ ನನ್ನ ಹಿಂದ”, “ಹಕ್ಕು” ಮೊದಲಾದ ಕವಿತೆಗಳು ಉದಾಹರಣೆಯಾದರೆ, “ಈ ಸಂಪ್ರದಾಯಗಳನ್ನು ಉಳಿಸಿಕೊಳ್ಳುತ್ತಲೇ ಹೊಸತನವನ್ನು ಸಾಧಿಸುತ್ತಾ ಹೋದ ಕವಿಗಳಲ್ಲಿ ನಿಸಾರರು ತುಂಬಾ ಗಮನಾರ್ಹರು. ಹಾಗೆಂದೇ ಅವರು ಉತ್ತಮ ಕವಿಗಳಾಗಿಯೂ ಜನಪ್ರಿಯರಾಗಿದ್ದಾರೆ. ವ್ಯಂಗ್ಯ ಕೂಡಾ ಅವರಲ್ಲಿ ಸಮಸ್ತವನ್ನು ಹಳಿಯುವ ಧಿಕ್ಕಾರದ ದೃಷ್ಟಿಯಾಗದೇ, ನಮ್ಮ ಮಿತಿಗಳನ್ನು ಕಾಣಿಸಿ ಕೊಡುವ ಆರೋಗ್ಯಕರ ಆತ್ಮವ್ಯಂಗ್ಯವಾಗಿ ಪರಿಣಮಿಸಿ ಜೀವನವನ್ನು ಶೋಧಿಸಿ ಸಂಸ್ಕರಿಸಿರುವ ಚಿಕಿತ್ಸಕ ದೃಷ್ಟಿಯಾಗಿದೆ ಎಂಬ ಮಾತಿಗೆ ‘ರಂಗೋಲಿ ಮತ್ತು ಮಗ’, ‘ರಾಮನ್ ಸತ್ತ ಸುದ್ದಿ’ ಮೊದಲಾದುವು ಉದಾಹರಣೆಯಾಗುತ್ತವೆ. “ಭಾಷಾ ಪ್ರಯೋಗದಲ್ಲಿ ನಿಸಾರರು ತೋರುವ ಎಚ್ಚರ, ತೂಕ, ಶುದ್ಧಿ-ಇವು ಅವರ ಕಾವ್ಯದ ವಿಶಿಷ್ಟ ಗುಣಗಳು, ಭಾಷೆಯಲ್ಲಿ ಅವರು ತೋರುವ ಕಾಳಜಿ, ಅನುಭವ, ಬದುಕುಗಳ ಬಗ್ಗೆ ಅವರಿಗಿರುವ ಗಾಂಭೀರ್ಯವನ್ನು ಸೂಚಿಸುತ್ತದೆ ಎಂಬ ಮಾತಿಗೆ ‘ನಿತ್ಯೋತ್ಸವ’, ‘ಮಾಸ್ತಿ’ ಮೊದಲಾದ ಕವಿತೆಗಳು ಉದಾಹರಣೆಯಾಗುತ್ತವೆ.

ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯ ಎನ್ನಿಸುವ ಅವರ ಐದು ಕವಿತೆಗಳು- “ರಂಗೋಲಿ ಮತ್ತು ಮಗ”, “ಅಮ್ಮ ಆಚಾರ ನಾನು”, “ಹಕ್ಕು”, “ರಾಮನ್ ಸತ್ತ ಸುದ್ದಿ” ಮತ್ತು “ಮಾಸ್ತಿ”ಗಳನ್ನು ಇಲ್ಲಿ ಆರಿಸಿಕೊಳ್ಳಲಾಗಿದೆ. ಇವುಗಳಲ್ಲಿ ಮೊದಲಿನೆರಡು ಮುಸ್ಲಿಂ ಸಂವೇದನೆಯ ಹಿನ್ನೆಲೆಯಲ್ಲಿ ಭಾಷೆಯ ಚಾಚು, ಬೀಸು, ಕವಿತೆಯ ಕಟ್ಟುವಿಕೆಯಿಂದ ಗಮನಸೆಳೆದರೆ ನಂತರದ ಎರಡು, ಸಣ್ಣ ವಿಷಯವನ್ನು ಸೂಕ್ಷ್ಮವಾಗಿಸಿ ವಿಶ್ಲೇಷಿಸುತ್ತದೆ. ವ್ಯಕ್ತಿಚಿತ್ರದ ಪದರು ಪದರಾದ ನವಿರಾದ ಒಳಹೊರಗುಗಳು ಕೊನೆಯ ಕವಿತೆಯಲ್ಲಿ ಬಿಚ್ಚಿಕೊಂಡಿದೆ.

“ರಂಗೋಲಿ” ಹಿಂದೂಗಳ ವಿಶಿಷ್ಟ ಸಂಪ್ರದಾಯ. ಬೆಳಗೆದ್ದು ಮನೆಯ ಬಾಗಿಲನ್ನು ಶುಚಿಗೊಳಿಸುವ ಜೊತೆಗೆ ಸುಂದರವಾದ ರಂಗೋಲಿ ಇಡುವ ಪದ್ಧತಿಯು ಶುಭ ಅಶುಭ ಕಾರ್ಯಕಾರಣ ಸಂಬಂಧವನ್ನೂ ಹೊಂದಿ (ತಿಥಿ ದಿನ ರಂಗೋಲಿ ಇಡುವುದಿಲ್ಲ) ಪವಿತ್ರವೂ ಆಗಿರುವಂಥದು. ತೀರಾ ವಿಭಿನ್ನವಾದ ಎರಡು ಧರ್ಮಗಳ ವಿಚಿತ್ರ ಸಹಯೋಗ ಈ ದೇಶದಲ್ಲಿ ಒಂದು ಸಾವಿರ ವರ್ಷಗಳ ಪ್ರಾಚೀನತೆಯನ್ನು ಹೊಂದಿದೆ. ಹಿಂದೂಗಳಿಗೆ ಪವಿತ್ರವಾದುದು ಇಸ್ಲಾಂಗೆ ನಿಷಿದ್ಧ. ಅವರಿಗೆ ಮುಖ್ಯವಾದುದು ಇವರಿಗೆ ವಿಷಮ. ಆದರೂ ಇಬ್ಬರೂ ಈ ದೇಶದಲ್ಲಿ ಸಹಬಾಳ್ವೆ ನಡೆಸುತ್ತಾರಲ್ಲಾ ಅದೇ ಆಶ್ಚರ್ಯ. ಇಲ್ಲೇ ಹುಟ್ಟಿ, ಬೆಳೆದು ಇಲ್ಲಿಯ ನೆಲ, ಜಲ, ಭಾಷೆ, ಪರಿಸರಗಳಿಗೆ ಹೊಂದಿಕೊಂಡು ಬಾಳಿದರೂ ರಂಗೋಲಿ ಹಾಕುವ ಸಂಪ್ರದಾಯ ಮುಸ್ಲಿಮರಲ್ಲಿಲ್ಲ. ಹೀಗಾಗಿ, ಕವಿ ಬಾಲ್ಯದಿಂದಲೂ ರಂಗೋಲಿಯನ್ನು ಗಮನಿಸುತ್ತಾ ಬಂದವರು. ಈ ಕವಿತೆ ಮೂರು ಭಾಗದಲ್ಲಿದೆ. ಮೊದಲ ಭಾಗದ ಮೂರು ಪ್ಯಾರಾಗಳಲ್ಲಿ ರಂಗೋಲಿ ತನ್ನನ್ನು ಆಕರ್ಷಿಸಿದ ಪರಿಯನ್ನು ಕವಿ ವಿವರಿಸಿದ್ದಾರೆ. ರಂಗೋಲಿಯಿಂದಾಗಿ ಇಡೀ ಗಲ್ಲಿ ಕಿಲಕಿಲಸಿದಂತೆ ಅವರಿಗೆ ಅನ್ನಿಸುತ್ತದೆ. ಅದು ಚಿತ್ತಾಪಹಾರಿ ಚಿತ್ತಾರ ಎಂದೂ, ಜ್ಯಾಮಿತಿಯ ಗಡಸು ಜಟಿಲ ಸೂತ್ರಗಳಿಗೆ ಪರಿಹಾರ ಎಂದೂ, ಕೋನ, ರೇಖೆ, ಚೌಕ, ವೃತ್ತ, ಸ್ವಸ್ತಿಕ, ಮಂಡಲ ಚುಕ್ಕಿ ಎಂದೂ ಅನ್ನಿಸಿ ಕೊನೆಗೆ ಆರ್ಷ ಮಂತ್ರವೊಂದಕ್ಕೆ ಕಲೆಗಾರಿಕೆಯ ರೆಕ್ಕೆ ಮೂಡಿದಂತೆ ಕಾಣುತ್ತದೆ ಎಂಬ ಆಧ್ಯಾತ್ಮಿಕ ಅರ್ಥವೂ ಬಂದುಬಿಡುತ್ತದೆ. ಈ ವರ್ಣನೆಯಲ್ಲಿ ರಂಗೋಲಿಯ ಸ್ಥೂಲ ಪರಿಚಯದ ಜೊತೆಗೆ ಅಗಾಧ ಮೆಚ್ಚುಗೆಯೂ ಕಂಡುಬರುತ್ತದೆ. ಕವಿತೆಯ ಎರಡನೇ ಭಾಗದಲ್ಲಿ ನಾಲ್ಕು ಚಿತ್ರಗಳಿವೆ. ಅದನ್ನು ಬೆಳ್ಳನೆಯ ಕಗ್ಗಾಡು ಎಂದು ಕರೆದು, ಪಕ್ಕದ ಮನೆಯವರು ರಂಗೋಲಿ ಬಿಡಿಸುವುದನ್ನು ಚಾಕ್‌ಪೀಸಿನ ಪುಡಿಯಿಂದ ನಕಲಿಸಲು ಪ್ರಯತ್ನಿಸಿ ತಾಯಿಯಿಂದ ಬೈಸಿಕೊಂಡದ್ದು, ಈ ಪಕ್ಕದ ಮನೆ ವೇದದಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ತಿಳಿಯದೇ ನಾಚಿ ನೀರಾದದ್ದು, ಕವಿತೆಯ ಮೂರನೇ ಭಾಗದಲ್ಲಿ ಕವಿ ಬೆಳೆದು ದೊಡ್ಡವನಾಗಿದ್ದಾನೆ. ಅವನ ಮಗನಿಗೇ ಈಗ ಹತ್ತು ವರ್ಷ. ರಂಗೋಲಿಯ ಬಗ್ಗೆ ಕವಿಗಿದ್ದ ಪೂಜ್ಯಭಾವ, ಕುತೂಹಲ, ಅಚ್ಚರಿ, ಈ ಯಾವುದೂ ಮಗನಿಗಿಲ್ಲ. ಅವನಿಗಿರುವುದು ಸಾಮಾನ್ಯ ದರ್ಜೆಯ ಪ್ರಶ್ನಿಸುವ ಕುತೂಹಲ ಮಾತ್ರ. ‘ಏಕೆ ಬಿಡಿಸುತ್ತಾರೆ ಇವರು ಈ ಚಕ್ರಬಂಧ’ ಎಂಬ ಪ್ರಶ್ನೆ ಮಾತ್ರ. ಅದಕ್ಕೆ ಸರಿಯಾದ ಉತ್ತರ ಕವಿಗೆ ಗೊತ್ತಿಲ್ಲದಿರುವುದರಿಂದಲೇ “ಅದು ನಮ್ಮ ಪದ್ಧತಿಗೆ ಸಲ್ಲ” ಎಂಬ ಅಸಂಬದ್ಧ ಉತ್ತರ ಕೊಡುತ್ತಾರೆ. ಮಗನಿಗೆ ಸಮಾಧಾನವಾಗದ್ದರಿಂದ ‘ಖುರಾನ್‌ನಲ್ಲಿ ಹೇಳಿಲ್ಲ’ ಎಂದು ಸಮಾಧಾನ ನೀಡಿದರೂ ಇನ್ನೊಂದು ಪ್ರಶ್ನೆ ಅವನಿಂದ ಬಂದಿದೆ. “ಮನೆ ಕಟ್ಟಿಸಿದ ಇಸ್ವಿ, ಹೆಸರು ಮನೆ ಮುಂದೆ ಬರೆಸಿರುವೆಯಲ್ಲ ಹೇಳಿದೆಯೇ ಖುರಾನಿನಲ್ಲಿ?” ಈ ಪ್ರಶ್ನೆಗೆ ಉತ್ತರಿಸಲಾಗದ ಕವಿಗೆ ಮಗನು ಆತ್ಮಸಾಕ್ಷಿಯ ಕತ್ತು ಹಿಚುಕಬಂದವನಂತೆ ಕಾಣುತ್ತಾನೆ. ಮಗನನ್ನು ಗದರಿಸುತ್ತಾರೆ. ಆದರೆ ರಂಗೋಲಿ ಅವರ ಮನಸ್ಸಿನಲ್ಲಿ ಪ್ರಶ್ನೆ ಆಶ್ಚರ್ಯ ಎರಡನ್ನೂ ಉಳಿಸುತ್ತದೆ. ಅಕ್ಷರಗಳ ಮೂಲಕವೇ ಪ್ರಾಸ ಲಯಗಳ ಕಟ್ಟಡ ಕಟ್ಟಿ ನಿಲ್ಲಿಸಿದ ಒಂದು ಸುಂದರವಾದ ಪ್ರತಿಮೆ ಇದು. ಮುಸ್ಲಿಂ ಸಂವೇದನೆಯ ಸೂಕ್ಷ್ಮ ಕಲೆಗಾರಿಕೆಯ ಅಭಿವ್ಯಕ್ತಿಯೂ ಹೌದು.

‘ಅಮ್ಮ ಆಚಾರ ನಾನು’ ಎಂಬ ಕವಿತೆಯ ಶೀರ್ಷಿಕೆ ತನ್ನ ವಸ್ತುವನ್ನು ಸ್ಪಷ್ಟಪಡಿಸುತ್ತದೆ. ಅಮ್ಮ ಸಂಪ್ರದಾಯಸ್ಥ. ಖುರಾನು, ನಮಾಜು, ರಂಜಾನುಗಳಲ್ಲಿ ಹೇಳತೀರದ ಆಸೆ, ಮಗ ಈಗಿನ ಕಾಲದವನು, ವಿದ್ಯಾವಂತೆ, ಬುದ್ಧಿವಂತೆ ಹೆಂಡತಿ ಬೇಕೆನ್ನುವವನು. ಬುರ್ಖಾ ತೊಡದೇ ಬೀದಿಯಲ್ಲಿ ತಿರುಗುವ ಮುಸ್ಲಿಂ ಹೆಂಗಸರನ್ನು ಬಜಾರಿ ಎನ್ನುವ ತಾಯಿ ಮಗನಿಗೆ ವಿದ್ಯಾವಂತ ಹೆಣ್ಣನ್ನು ತಂದಾಳೆ? ತಂದೆ ಬುದ್ಧಿವಾದ ಹೇಳಿದ. ಮಗ ಅನ್ನ ನೀರು ಬಿಟ್ಟ. ಕೊನೆಗೊಂದು ದಿನ ತಾಯಿ ರಾಜಿಯಾದಳು. ಡಬಲ್ ಪದವೀಧರೆಯ ಜೊತೆ ಮದುವೆಗೆ ಮುಂಚೆಯೇ ಭೇಟಿ ಮಾಡಿ ಮದುವೆಯಾಯಿತು. ಮೊದಲ ಸಲ ತಿರುಗಾಡಲು ಹೊರಟಾಗ ಅವಳ ವರ್ಣನೆಯನ್ನು ಕವಿಯ ಬಾಯಿಂದಲೇ ಕೇಳಬೇಕು.

ತೋಳಿಲ್ಲದ ರವಿಕೆಯುಟ್ಟು, ಭಾರೀ ಸೀರೆಯನ್ನು ಸೊಂಟದ
ಕೆಳಗೆ ನಾಜೂಕಾಗಿ ಕಟ್ಟಿ ಕೊರಳಿಗೆ ಚಿನ್ನದ ಸರ,
ಕಾಲಿಗೆ ಹೈ ಹೀಲ್ಡುಕೆರ, ಕಿವಿಗೆ ಬೆರಳಿಗೆ ಉಂಗುರ,
ಲಿಪ್‌ಸ್ಟಿಕ್ಕು ಪೌಡರು ರೂಜು ಬಳಿದು ದೃಷ್ಟಿ ಬೊಟ್ಟಿಟ್ಟು
ಹೆರಳ ಗೋಪುರದಲ್ಲಿ ಕೂದಲ ಬಿಗಿದು ಎಡಬೈತಲೆ ತೆಗೆದು

ಹೀಗಿದ್ದ ಅವಳು “ಕೊಂಚ ತಡೆಯಿರಿ” ಎಂದು ಒಳಹೋಗಿ ಬಂದು “ನಡೆಯಿರಿ” ಎಂದಾಗ ಅವನಮ್ಮನ ಬುರ್ಖಾ ತೊಟ್ಟಿದ್ದಳು. ಕವಿಗೆ ತಲೆ ಸುತ್ತಿ ಬಂದು ಮೂಕನಾದ. ಇಲ್ಲಿ ಇಸ್ಲಾಂ ಧರ್ಮವೇ ಸಮನತೆ ಮತ್ತು ನೂತನತೆಗಳ ಘರ್ಷಣೆಯ ಹಿನ್ನೆಲೆಯಲ್ಲಿ ನವಿರಾದ ವ್ಯಂಗ್ಯಕ್ಕೆ ಗುರಿಯಾಗಿದೆ. ಒಂದು ಕಾಲದಲ್ಲಿ ವಿದ್ಯಾವಂತರಾದಂತೆ ಹಳೆಯ ಸಂಪ್ರದಾಯಗಳಿಗೆ ವಿದಾಯ ಹೇಳಿ ಮುಸ್ಲಿಮರೂ ಆಧುನಿಕರಾಗುತ್ತಿದ್ದಾರೆ ಎಂಬ ಆಶಾವಾದವುಂಟಾಗಿತ್ತು. ಈ ಕವಿತೆ ಗಂಭೀರ ನೆಲೆಯಲ್ಲೇನೂ ಕೆಲಸ ಮಾಡುತ್ತಿಲ್ಲ. ಆದರೂ ಇಸ್ಲಾಂ ಮೂಲಭೂತವಾದ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ವಿದ್ಯಾವಂತ ಅವಿದ್ಯಾವಂತ ಮುಸ್ಲಿಂ ಹೆಂಗಸರೆಲ್ಲರೂ ಬುರ್ಖಾಗಳಿಗೆ ಶರಣು ಹೋಗುತ್ತಿರುವ ಈ ದಿನಗಳಲ್ಲಿ ನಿಸಾರರ ತಿಳಿ ಹಾಸ್ಯದ ಈ ವ್ಯಂಗ್ಯವೂ ಆಪ್ಯಾಯಮಾನವಾಗಿ ಕಾಣಿಸಿ ಎಲ್ಲಿ ಹೋದವು ಆ ಮುಕ್ತ ದಿನಗಳು ಎಂದು ನಿಟ್ಟುಸಿರುಬಿಡುವಂತಾಗುತ್ತದೆ.

ಬಂಡಾಯದೊಳಕ್ಕೆ ಬಂದ ಮುಸ್ಲಿಂ ಸಂವೇದನೆಯು ತೀವ್ರ ಪ್ರತಿಭಟನೆಯಿಂದ ಕೂಡಿತ್ತು. ಕತೆ ಕವಿತೆಗಳ ಮೂಲಕ ಅದುವರೆಗೂ ಅನಾವರಣವಾಗದಿದ್ದ ಮುಸ್ಲಿಂ ಜಗತ್ತೊಂದನ್ನು ಅವರು ಅನಾವರಣಗೊಳಿಸಿದರೂ ಅದರಲ್ಲಿ ಕೆಚ್ಚಿತ್ತು, ದುಃಖವಿತ್ತು, ಆರ್ತತೆಯಿತ್ತು, ಮೂಢನಂಬಿಕೆಗಳ ವಿರುದ್ಧದ ಆರ್ಭಟವಿತ್ತು. ಸಾರಾ ಅಬೂಬಕರ್, ಬಾನು ಮುಸ್ತಾಕ್, ಫಕೀರ್ ಮಹಮದ್‌ ಕಟ್ಪಾಡಿ, ಅಬ್ದುಲ್ ರಹಮಾನ್ ಪಾಷಾ, ಬೋಳುವಾರು ಮಹಮದ್‌ ಕುಂಯಿ ಇವರು ಕತೆಗಳ ಮೂಲಕ ಇದನ್ನ ಮಾಡಿದರೆ ಡಿ ಬಿ ರಜಿಯಾ, ಶರೀಫಾ ಕವಿತೆಗಳ ಮೂಲಕ ಮಾಡಿದರು. ಬಂಡಾಯದ ಸಹಜ ಗುಣವೇ ಇವರ ಕಾವ್ಯದ ಗುಣವೂ ಆಯಿತು.

ಆದರೆ ಅದಕ್ಕೂ ಮೊದಲೇ ಕನ್ನಡ ಕಾವ್ಯಕ್ಕೆ ಮುಸ್ಲಿಂ ಸಂವೇದನೆಯನ್ನು ತಂದ ನಿಸಾರರು ಅದಕ್ಕೊಂದು ಸೂಕ್ತ ವೇದಿಕೆ ಕಲ್ಪಿಸಿದ್ದರು.

ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ಎಂಬ ಸಂವಿಧಾನದ ಪಾಠವನ್ನು ಪ್ರಾಥಮಿಕ ಹಂತದಲ್ಲಿಯೇ ಎಲ್ಲರೂ ಪಠ್ಯವಾಗಿ ಓದಿದರೂ ಪ್ರೌಢರಾದ ನಂತರವೂ ಅದರ ಸರಿಯಾದ ಅರ್ಥ ಎಲ್ಲರಿಗೂ ಆಗಿರುತ್ತದೆ ಎಂದು ಹೇಳಲು ಬರುವುದಿಲ್ಲ. ಅಲ್ಲದೇ ಎಲ್ಲರೂ ಹಕ್ಕುಗಳನ್ನು ಸ್ಥಾಪಿಸುತ್ತಾರೆಯೇ ಹೊರತು ಕರ್ತವ್ಯಗಳ ಕಡೆ ಗಮನಕೊಡುವುದಿಲ್ಲ. ಇಂಥದೊಂದು ವಸ್ತುವನ್ನು ಕೇಂದ್ರವಾಗಿಟ್ಟುಕೊಂಡು ಅತ್ಯಂತ ಸರಳವಾದ ಭಾಷೆಯಲ್ಲಿ ಹೆಚ್ಚು ತೊಡಕಿಲ್ಲದೇ ಸಂವಹನವಾಗುವ ಚಿಕ್ಕಕವಿತೆ “ಹಕ್ಕು” ಈ ಕವಿತೆಯ ಮುಖ್ಯ ಪಾತ್ರಧಾರಿ ಕವಿಯೊಬ್ಬನೇ. ಇಲ್ಲಿ ಇನ್ನೊಬ್ಬನಿದ್ದರೂ ಅವನು ಕಾಣುವುದಿಲ್ಲ. ಕವಿ ತನ್ನ ಮನೆಯ ಮುಂದೆ ತಾನೇ ಬೆಳೆಸಿರುವ ತೆಂಗಿನಮರ ಎತ್ತರಕ್ಕೆ ಬೆಳೆದದ್ದು ತನ್ನ ನೆರಳನ್ನು ರಸ್ತೆಗೂ ಚಾಚಿದ್ದು ಕವಿಗೆ ಅರಿವಾಗುವುದು ಆ ನೆರಳಲ್ಲಿ ನಿಂತ ಮರವೊಂದನ್ನು ಕಂಡಾಗಲೇ. ತನ್ನ ಮರದ ನೆರಳಿನಲ್ಲಿ ನಿಂತ ಕಾರನ್ನು ಕಂಡಾಗಲೇ. ಅದು ಹಾಗೆ ನಿಂತಿದೆ ಎನ್ನುವ ಕಾರಣದಿಂದ ಕಾರು ತನ್ನದು ಎನ್ನಬಹುದೇ ಎಂಬ ಕೆಟ್ಟ ಕುತೂಹಲದ ಪ್ರಶ್ನೆಯೊಂದು ಕವಿಯ ಮನಸ್ಸಿನಲ್ಲಿ ಮೂಡಿದಾಗ ತನ್ನನ್ನು ತಾನೇ ನಿಯಂತ್ರಿಸಿಕೊಳ್ಳುವ ಸಲುವಾಗಿ ಅವನು ಮುಂದಿನಂತೆ ಊಹೆ ಮಾಡಿಕೊಳ್ಳುತ್ತಾನೆ. ಆ ಕಾರನ ಮಾಲೀಕನ ಮನಸ್ಥಿತಿಯ ಊಹೆ ಅದು. ಮರದ ನೆರಳು ಇರುವ ಕಾರಣದಿಂದ ರಸ್ತೆಯಲ್ಲಿ ಕಾರು ನಿಲ್ಲುತ್ತದೆ. ಆಗ ವಾಹನ ಸಂಚಾರಕ್ಕೆ ಅಡಚಣೆ. ಹೀಗಾಗಿ ಕತ್ತರಿಸು ಮರವ ಎಂದು ಹೇಳಿದರೆ ಅಂದರೆ ತನಗೆ ಹಕ್ಕು ಸ್ಥಾಪಿಸುವ ಹಕ್ಕು ಇರುವಂತೆಯೇ ಬೇರೆಯವರಿಗೂ ಇರುತ್ತದೆ. ತೆಂಗಿನಮರ ತನ್ನದು ಎನ್ನುವ ಹಕ್ಕು ಕಾರು ತನ್ನದು ಎನ್ನುವವರೆಗೆ ಹೋಗಬಾರದು. ಆಗ ಕಾರಿನ ಮಾಲೀಕನೂ ಕಾರು ತನ್ನದು ಎಂಬುದರಿಂದ ಮರ ತನ್ನದು ಎನ್ನುವವರೆಗೆ ಬರಬಹುದು – ಈ ಊಹಗೇ ಹೆದರಿದ ಕವಿ ಈಗ ಕಾರಿನ ಅಂದವನ್ನು ಮೆಚ್ಚುತ್ತಾ (ಇದುವರೆಗೆ ಕಾರಿನ ಅಂದ ಅವನ ಗಮನಕ್ಕೆ ಬಂದಿರುವುದಿಲ್ಲ) ಕಾರಿನಲ್ಲಿ ಯಾರೂ ಇಲ್ಲದ್ದನ್ನು ಕಂಡು ನಿಟ್ಟುಸಿರು ಬಿಡುತ್ತಾ ಬೇಗ ಮನೆಯೊಳಕ್ಕೆ ಹೋಗುತ್ತಾನೆ. ಪ್ರಜಾಪ್ರಭುತ್ವದ ಬಹುಸೌಮ್ಯ ವಿಡಂಬನೆ ಇದು.

“ರಾಮನ್ ಸತ್ತ ಸುದ್ದಿ” ಹಲವು ಹಂತದಲ್ಲಿ ಕೆಲಸ ಮಾಡುವ ಒಂದು ಮುಖ್ಯ ಕವಿತೆ. ಇಲ್ಲಿ ಸರ್ ಸಿ.ವಿ. ರಾಮನ್ ಅಂತಹ ಜಗತ್ತಿಗೇ ಗೊತ್ತಿರುವ (ಎಂದು ನಾವು ಭಾವಿಸುವ) ಶ್ರೇಷ್ಠ ವಿಜ್ಞಾನಿ ಒಂದು ಕಡೆ, ಯಾರಿಗೂ ಗೊತ್ತಿಲ್ಲದ (ಇದೂ ನಮ್ಮ ಭಾವನೆ) ಹನುಮ ಒಂದು ಕಡೆ ಸರ್ ಸಿ.ವಿ. ರಾಮನ್ ಪ್ರಸಿದ್ಧ ವಿಜ್ಞಾನಿಯಾಗಿ ಗೊತ್ತಿರುವುದು ದೇಶದ ವಿದ್ಯಾವಂತರಿಗೆ ಮಾತ್ರ. ಹಳ್ಳಿಯ ಅವಿದ್ಯಾವಂತ, ಬೇಸಾಯ ಮಾಡುವ ಹನುಮನಿಗೆ ಅವರು ಯಾರು ಎಂದೂ ಗೊತ್ತಿಲ್ಲ. ಅವರು ಸತ್ತಿರುವುದೂ ಗೊತ್ತಿಲ್ಲ. ಏಕೆಂದರೆ ಅವನು ಪತ್ರಿಕೆ ಓದುವುದಿಲ್ಲ. ಅವನ ಕಾಳಜಿಯಲ್ಲಿ ಮಳೆ, ಬೆಳೆ, ಗೊಬ್ಬರ, ಹಳ್ಳಿಯ ಕ್ಷುಲ್ಲಕ ಕಾದಾಟ ಇಷ್ಟೇ. ಹ್ಯಾಪಮೊಲೆಯ ಹೆಂಡತಿ, ಸಿಂಬಳ ಸುರುಕ ಮಕ್ಕಳು, ಗದ್ದೆ, ಧಣಿ, ದೇವರು, ಗ್ರಾಮದೇವತೆ ಇಷ್ಟೇ. ಈ ಹಂತದಲ್ಲಿ ರಾಮನ್‌ಗೆ ಸಮಾನಾಂತರವಾಗಿ ಕವಿ ತನ್ನನ್ನು ಗುರುತಿಸಿಕೊಳ್ಳುತ್ತಾನೆ. ಏಕೆಂದರೆ ಒಬ್ಬ ಪ್ರಜ್ಞಾವಂತ ಕವಿಯಾಗಿ ತಾನು ಕನ್ನಡ, ಗಡಿ, ನದಿ, ಪದ್ಯ, ಪ್ರತಿಷ್ಠೆ ಇವುಗಳ ಬಗ್ಗೆ ಯೋಚಿಸಿದಂತೆ ಹನುಮ ಯೋಚಿಸುವುದಿಲ್ಲ. ಹೀಗಾಗಿ ಇಲ್ಲಿ ರಾಮನ್ ಮತ್ತು ಕವಿ ಒಂದು ಬದಿಯಲ್ಲಿ ನಿಂತರೆ ಹನುಮ ಮತ್ತು ಇದೇ ಗ್ರಾಮದ ಬದುಕು ಇನ್ನೊಂದು ಬದಿಯಲ್ಲಿ ನಿಲ್ಲುತ್ತವೆ. ಇವೆರಡೂ ಪರಸ್ಪರ ಪರಿಚಯವೇ ಇಲ್ಲದ ಬೇರೆ ಬೇರೆ ಪ್ರಪಂಚಗಳು, ಒಂದರ ವಿಷಯ ಇನ್ನೊಂದಕ್ಕೆ ತಿಳಿಯದು. ಆದ್ದರಿಂದಲೇ ರಾಮನ್ ಸತ್ತ ಸುದ್ದಿ ಕೇಳಿ ಕವಿಗೆ ದುಃಖವಾಗಿದೆ. ಆ ದುಃಖವನ್ನು ಹಂಚಿಕೊಳ್ಳಲೂ ಅವರಿಗೆ ಈ ಜಗತ್ತಿನಲ್ಲಿ, ಈ ಇನ್ನೊಂದು ಜಗತ್ತಿನಲ್ಲಿ ಯಾರೂ ಸಿಗುತ್ತಿಲ್ಲ. ಆದ್ದರಿಂದ ರಾಮನ್ ಸತ್ತರೂ ಇಲ್ಲಿ ಸುದ್ದಿಯಾಗುವುದಿಲ್ಲ. ಹಾಗೆಯೇ ತಾನು ಸತ್ತರೂ, ಹನುಮ ಸತ್ತರೂ ಸುದ್ದಿಯಾಗುವುದಿಲ್ಲ ಎನ್ನಿಸಿದಾಗ ಸಾವಿನ ಅಗಾಧತೆ ಇಡಿ ಇಡಿಯಾಗಿ ಕವಿತೆಯ ತುಂಬಾ ಆವರಿಸಿಕೊಳ್ಳುತ್ತದೆ. ಬದುಕು, ಸಾವನ್ನು ಜೀರ್ಣಿಸಿಕೊಂಡು ಬಿಡುವ ಈ ಪ್ರಕ್ರಿಯೆ ಕವಿತೆಯ ಕೇಂದ್ರಬಿಂದು. ಇದು ವಾಸ್ತವವೂ ಹೌದು. ಪ್ರತಿಮೆಯೂ ಹೌದು. ಕೇವಲ ಕುತೂಹಲಕ್ಕಾಗಿ ಇದನ್ನು ಕೆ.ಎಸ್.ನ. ಅವರ ‘ಮನೆಯಿಂದ ಮನೆಗೆ’ ಕವಿತೆಯ ಪಕ್ಕದಲ್ಲಿಟ್ಟು ನೋಡಬಹುದು. ಅಲ್ಲಿಯೂ ಸಾವು ನಿರಾಳವಾಗಿ ಎಲ್ಲವನ್ನು ಆವರಿಸಿಕೊಳ್ಳುತ್ತದೆ. ಎರಡೂ ಕವಿತೆಗಳ ಶಿಲ್ಪದಲ್ಲಿ ವ್ಯತ್ಯಾಸವಿರಬಹುದೇ ಹೊರತು ಆಶಯ ಒಂದೇ ಆಗಿ ತೋರುತ್ತದೆ. ಇಂತಹ ಸಮಾನ ಆಶಯವುಳ್ಳ, ನವ್ಯದ ಸಂದರ್ಭದಲ್ಲಿ ರಚಿತವಾದ ಕವಿತೆಗಳನ್ನು ಒಟ್ಟಿಗೇ ಇಟ್ಟು, ಅಧ್ಯಯನ ಮಾಡುವ ಕೆಲಸ ಬಹಳ ಕುತೂಹಲಕಾರಿಯಾದುದು. ಯಾರಾದರೂ ಅವಶ್ಯವಾಗಿ ಮಾಡಬೇಕಾದದ್ದು (ನಾನೇ ಮಾಡುವ ಆಸೆ!) ಈ ಎರಡೂ ಕವಿತೆಗಳು (“ಹಕ್ಕು” ಮತ್ತು “ರಾಮನ್ ಸತ್ತ ಸುದ್ದಿ”) ಸಾಮಾಜಿಕ ಕಳಕಳಿಯಿಂದ ಹುಟ್ಟಿದರೂ ಕೊನೆಯಲ್ಲಿ ಅಂತಃಪ್ರಜ್ಞೆಯಲ್ಲಿ ಲೀನವಾಗುವ ರೀತಿ ಅದ್ಭುತವಾಗಿದೆ.

ವ್ಯಕ್ತಿಚಿತ್ರಗಳಿಗೇ ಒಂದು ವಿಶಿಷ್ಟ ಪರಂಪರೆಯಿದೆ. ಅದು ಚಿತ್ರಕಲೆಯಾದರೆ ಅದಕ್ಕೊಂದು ಇತಿಹಾಸ, ಶಿಲ್ಪಕಲೆಯಾದರೆ ಅದಕ್ಕೊಂದು ಇತಿಹಾಸ, ಮತ್ತೆ ಅದು ಪ್ರಬಂಧವಾದರೆ ಒಂದು ತೆರ, ಜೀವನ ಚರಿತ್ರೆಯಾದರೆ ಒಂದು ತೆರ, ಕಾದಂಬರಿಯಾದರೇ ಒಂದು ತೆರ, ಪದ್ಯದಲ್ಲಿ ಒಡಮೂಡಿದರೆ ಒಂದು ತೆರ. ಈ ಪ್ರತಿಯೊಂದಕ್ಕೂ ದೀರ್ಘ ಇತಿಹಾಸವಿದೆ. ಇವೆಲ್ಲವುಗಳಲ್ಲಿ ತನ್ನ ಕಲೆಗಾರಿಕೆ, ಸಂಯಮ ಮತ್ತು ಸಂಕ್ಷಿಪ್ತತೆಯಿಂದಾಗಿಯೇ ಗಮನಸೆಳೆಯುವಂಥದು ಪದ್ಯದಲ್ಲಿ ರಚನೆಯಾಗುವ ವ್ಯಕ್ತಿಚಿತ್ರ. ಪಂಪನು ಆಶ್ರಯದಾತನಾದ ಅರಿಕೇಸರಿಯ ಬಗ್ಗೆ, ರನ್ನನು ಇರಿವಬೆಡಂಗ ಸತ್ಯಾಶ್ರಯನ ಬಗ್ಗೆ ಬರೆದುದರಿಂದ ಪ್ರಾರಂಭಿಸಿ ಗೋವಿಂದ ವೈದ್ಯನು ಕಂಠೀರವ ನರಸರಾಜ ಒಡೆಯರ ಬಗ್ಗೆ ಬರೆದಲ್ಲಿ ಯವರೆಗಿನ ದೀರ್ಘ ಇತಿಹಾಸ ಹೊಂದಿರುವ ಪದ್ಯಗಳ ವ್ಯಕ್ತಿಚಿತ್ರದಲ್ಲಿ ನಿಸಾರ್ ಅಹಮದರು ಮಾಸ್ತಿಯವರ ಬಗ್ಗೆ ಬರೆದ ವ್ಯಕ್ತಿಚಿತ್ರಕ್ಕೆ ಇರುವ ಇನ್ನೊಂದು ವಿಶೇಷತೆಯೆಂದರೆ ಒಬ್ಬ ಕವಿಯು ಇನ್ನೊಬ್ಬ ಕವಿಯ ಬಗ್ಗೆ ಬರೆದಿರುವಂಥದು.

ಮಾಸ್ತಿಯವರದು ನವೋದಯ ಸಾಹಿತ್ಯದ ಪ್ರಮುಖ ಹೆಸರು. ಸಣ್ಣ ಕತೆಗಳ ಜನಕ ಎಂದು ಹೆಸರಾದ ಅವರು ಕಥನ ಕವನಗಳನ್ನು, ನಾಟಕಗಳನ್ನು, ಕಾದಂಬರಿಗಳನ್ನು ಬರೆದಿದ್ದಾರೆ. ಸರಳತೆ ಸೌಜನ್ಯಕ್ಕೆ ಹೆಸರಾದ ಅವರನ್ನು ನವ್ಯದ ಸಂದರ್ಭದಲ್ಲಿ ಬರೆಯುತ್ತಿದ್ದ ಕವಿಯೊಬ್ಬರು ಹೇಗೆ ಅರ್ಥಮಾಡಿಕೊಂಡಿದ್ದಾರೆ ಎಂಬುದೇ ಈ ಕವಿತೆಯ ಸ್ವಾರಸ್ಯ. ಈ ಕವಿತೆಯೂ ನಾಲ್ಕು ಭಾಗಗಳಲ್ಲಿದೆ. ಮೊದಲ ಭಾಗದಲ್ಲಿ ಗಾಂಧಿಬಜಾರಿನ ಹಿರಿ ಚೌಕದಲ್ಲಿ ಪ್ರತಿದಿನ ತಮ್ಮ ಗವಿಪುರದ ಮನೆಯಿಂದ, ಗಾಂಧಿಬಜಾರಿನ ಕ್ಲಬ್ಬಿಗೆ ನಡೆದು ಹೋಗುತ್ತಿದ್ದ ಮಾಸ್ತಿಯವರು ಕವಿಗೆ ಎದುರಾಗುತ್ತಾರೆ. “ವಯಸ್ಸು ಅನುಭವ ಹೂಡಿ ಸುಖದುಃಖ ಬೆಳೆದ ಮುಖ ಹಿಂದೊಮ್ಮೆ ನೆಲೆಸಿದ್ದ ಬೆಳಕನ್ನು ಕನವರಿಸುತ್ತಿರುವ ಮಂದಗಣ್ಣು, ಸಾಂತ್ವನವ ನುಡಿದಿರುವ ಚಷ್ಮ” ಇದು ಕವಿ ಕೊಡುವ ಅವರ ಒಂದು ಚಿತ್ರ. ಅವರ ಕೈಯಲ್ಲೊಂದು ‘ಕೊಡೆಯ ಗದೆ’ ಇದೇನು ಈಗಿನ ಕಾಲದ ಚಿಕ್ಕ ಮಡಿಸುವ ಕೊಡೆ ಅಲ್ಲ. ಹಿಂದಿನ ಕಾಲದ ಉದ್ದನೆಯ ಕೊಡೆ. ಅದು ಬಿಸಿಲಿಗೂ ಸರಿ ಮಳೆಗೂ ಸರಿ. ಅಷ್ಟೇ ಅಲ್ಲದೇ ಸಾಲು ವೃಕ್ಷದ ಹಕ್ಕಿ ಹಿಕ್ಕೆ, ಬೀದಿ ಕುನ್ನಿ, ಭಿಕ್ಷುಕ, ಪೋಲಿ ದನ ಎಲ್ಲಕ್ಕೂ ಅದೇ ರಕ್ಷೆ. ಇಂತಹ ಮಹನೀಯರನ್ನು ಕಂಡುದಷ್ಟರಿಂದಲೇ ಕವಿಯ ಮೇಲೆ ಉಂಟಾಗುವ ಪರಿಣಾಮ ಇದು :- “ಬೆಳಗಾಗ ಚಳಿಯಲ್ಲಿ ಬಿಸಿನೀರ ಮಿಂದಂತೆ ಎದೆ ಹಗುರಾಗುವುದು, ಸ್ವಚ್ಛವಾಗುವುದು”. ಕವಿತೆಯ ಎರಡನೇ ಭಾಗದಲ್ಲಿ ಮಾಸ್ತಿಯವರ ಇಂತಹ ಸುಪ್ರಸನ್ನ ವ್ಯಕ್ತಿತ್ವಕ್ಕೆ ಸಮನಾಂತರವಾಗಿ ೧೯೪೦ನೇ ಇಸವಿಯ ಬೆಂಗಳೂರಿನ ಮಾದರಿ ಚಿತ್ರವೊಂದು ಮೂಡುತ್ತದೆ. ಇದು ಪ್ಯಾಷನ್ನು ಪಹರೆಗಳ, ಕಸಿಹಣ್ಣು ಚಹರೆಗಳ ವರ್ತಮಾನದ ನಟ್ಟನಡುವಿನ ಹುಚ್ಚುಹುಮ್ಮಸ್ಸಿನ, ನೂಕುನುಗ್ಗಲಿನ ಬೆಂಗಳೂರು, ಗಾಂಧೀಬಜಾರಿನ ಕ್ಲಬ್ಬಿನಲ್ಲಿ ಕಿಟ್ಟಿ, ಗುಂಡೂ, ಸುಬ್ಬು ಅವರಿಗಾಗಿ ಕಾಯುತ್ತಾರೆ. (ಈ ಕಿಟ್ಟಿ ಅಂದರೆ ಅ.ನ.ಕೃ., ಗುಂಡೂ ಅಂದರೆ ಟಿ.ಪಿ. ಕೈಲಾಸಂ, ಸುಬ್ಬು ಅಂದರೆ ತ.ರಾ.ಸು. ಎಂಬ ಊಹೆಯೂ ಇದೆ) ಮೂರನೇ ಭಾಗದ ಕವಿತೆಯು ಕ್ಲಬ್ಬಿನಲ್ಲಿ ಇಪ್ಪತ್ತೆಂಟು ಎಂಬ ಇಸ್ಪೀಟಿನ ಆಟದ ಒಂದು ಚಿತ್ರ ಕೊಡುತ್ತದೆ. ಇಪ್ಪತ್ತೆಂಟು ಎನ್ನುವ ಪದಕ್ಕೆ ಅದೂ ಇದೂ ಮಾತನಾಡುವುದು ಎಂಬ ಅರ್ಥವೂ ಇಲ್ಲಿದೆ. ಅವು ಏನೆಂದರೆ ನಂಬರೆರಡರ ಬಸ್ಸಿನೆದುರು ಬಾಳೆಯ ಸಿಪ್ಪೆ ಟೈಲರನ ಎಡಗಾಲನ್ನು ಉಳುಕಿಸಿದ್ದು, ಪುರಭವನದಲ್ಲಿ ಸಂಗೀತ ಸಾಮ್ರಾಜ್ಞ ಶಂಕರಾಭರಣದಲ್ಲಿ ಪುಳುಕಿಸಿದ್ದು, ಅಬ್ದುಲ್ಲನ ಹೈಕೋರ್ಟು ರಿಟ್ ವಜಾ ಆದದ್ದು, ಕೋಟಾನೋಟಿನ ಕೃಷ್ಣನಿಗೆ ಸಜಾ ಆದದ್ದು, ಬದರಿ ಎಂಬುವವನ ನಾದಿನಿಗೆ ಒಳ್ಳೆಯ ವರ ಸಿಕ್ಕಿದ್ದು, ….. ಹೀಗೆ ರಷ್ಯಾ, ಚೀನಾ, ಕ್ಯೂಬಾ, ಅಮೇರಿಕಾ ದೇಶದ ವಾರ್ತೆಗಳೂ ಈ ಮಾತಿನ ಸಡಗರದಲ್ಲಿ ಇಸ್ಪೀಟು ಆಟ ತಪ್ಪಾಗಿ ಜೊತೆಯವರು ಜಗಳವಾಡುತ್ತಾರೆ. ಮಾಸ್ತಿಯವರದ್ದು ಸರಳವಾದ ಉತ್ತರ – Let us play the game for games Sake. ಈ ಒಂದೇ ವಾಕ್ಯ ಸಾಕು, ಬದುಕಿನ ವ್ಯಾಖ್ಯೆಯನ್ನೇ ಬರೆದುಬಿಡುತ್ತದೆ. “ಕಲೆಗಾಗಿ ಕಲೆ, Art for Art Sake” ಎಂಬ ಮಾತು ಇಂಗ್ಲೀಷಿನಿಂದ ಬಂದು ಕನ್ನಡ ಕಾವ್ಯಮೀಮಾಂಸೆಯಲ್ಲಿ ಬಹುಚರ್ಚೆಯಾದ ಪದ. ಅದೇ ರೀತಿ ಆಟಕ್ಕಾಗಿ ಆಟ ಎಂಬ ನಿಲುವು ಆರೋಗ್ಯಕರ ನಿಲುವು, ಅದು ಮಾಸ್ತಿಯವರ ನಿಲುವು. ಅದು ಅವರ ಜೀವನದ ರೀತಿಯೂ ಹೌದು. ಅದು ತೆರೆದ ಬದುಕು.

ಮಾಸ್ತಿಯವರ ನಗುಮುಖದ ಭಾವಚಿತ್ರ ಅತ್ಯಂತ ಪ್ರಸಿದ್ಧ. ಆ ನಗುವನ್ನು ಕವಿ ಇಲ್ಲಿ ಜುಲೈ ತಿಂಗಳಿನ ಶಿವಮೊಗ್ಗೆ (ಮಳೆಗಾಲ)ಗೆ ಹೋಲಿಸಿದ್ದಾರೆ. ಅದು “ಚಣಕ್ಕಷ್ಟು ಚಳಿ ನೂಲು, ಒಂದಿಷ್ಟು ಹೂ ಬಿಸಿಲು ಹೊರಗೆ ಕಚಪಿಚ ಕೆಸರು, ಒಳಗೆ ಬೆಚ್ಚನೆ ಸೂರು” ನಾಲ್ಕನೇ ಭಾಗದ ಕವಿತೆಯಲ್ಲಿ ಮಸಕು ಕತ್ತಲಾಗುತ್ತಲೇ ಮಾಸ್ತಿ ಮನೆಗೆ ಹೊರಟು ನಿಲ್ಲುತ್ತಾರೆ. ಕಾಲಿಗೆ ಒತ್ತಿದ ಗಾಜಿನ ಚೂರನ್ನು (ಬೇರೆಯವರ ಕಾಲಿಗೆ ಚುಚ್ಚದಿರಲೆಂದು) ಪಕ್ಕಕ್ಕೆ ಎಸೆದು ಹೋಗುವ ಅವರು ಚಂದ್ರನಂತೆ, ಸದ್ದಿರದೇ ಸಾಗುವ ಚಂದ್ರನಂತೆ ತೋರುತ್ತಾರೆ. ಇದು ನಿಸಾರರ ಅತ್ಯುತ್ತಮ ಕವಿತೆಗಳಲ್ಲಿ ಒಂದು.
*****
ನಿಸಾರ್ ಅಹಮದ್‌ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post `ಅರಬಿ’ಯದ ಅಭಿಮನ್ಯು
Next post ಷಣ್‍ಮುಖ

ಸಣ್ಣ ಕತೆ

 • ಮಂಜುಳ ಗಾನ

  ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

 • ತಿಥಿ

  "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

 • ಅಜ್ಜಿ-ಮೊಮ್ಮಗ

  ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

cheap jordans|wholesale air max|wholesale jordans|wholesale jewelry|wholesale jerseys