ಸ್ವಪ್ನ ಮಂಟಪ – ೯

ಸ್ವಪ್ನ ಮಂಟಪ – ೯

ಕರಿಯಮ್ಮ ಓಡೋಡಿ ಬಂದು ನೋಡಿದಾಗ ರಸ್ತೆಯಲ್ಲಿ ರಕ್ತದ ಕಲೆಯಿತ್ತು. ಪುಟ್ಟಕ್ಕಯ್ಯ ಮತ್ತು ಮಂಜುಳ – ಇಬ್ಬರೂ ಕರಿಯಮ್ಮ ನೊಂದಿಗೆ ದುಃಖಿತರಾಗಿದ್ದರು. ಆದರೆ ಕರಿಯಮ್ಮನ ದುಃಖಕ್ಕೆ ಸರಿ ಸಾಟಿಯಾದ ಮನಃಸ್ಥಿತಿ ಬೇರೆಯವರಲ್ಲಿ ಇರಲು ಹೇಗೆ ಸಾಧ್ಯ

ಅಲ್ಲಿ ಗುಂಪಾಗಿ ನಿಂತಿದ್ದ ಜನರು ಲಕ್ಷ್ಮಿಯನ್ನು ಶಿವಕುಮಾರ್‌ ಹೊತ್ತುಕೊಂಡು ಹೋದ ವಿಷಯ ತಿಳಿಸಿದರು. ಅಲ್ಲಿದ್ದವರಿಂದ ಗೊತ್ತಾದ ಮಾಹಿತಿಯ ಪ್ರಕಾರ ಮಂತ್ರಿ ಮತ್ತು ವಿದೇಶಿ ಕಂಪನಿಯ ಕಾರುಗಳು ರಭಸವಾಗಿ ಬಂದು, ರಸ್ತೆಯಲ್ಲಿ ಬರುತ್ತಿದ್ದ ಸ್ಕೂಲ್ ಹುಡಗ-ಹುಡುಗಿಯರನ್ನು ತಬ್ಬಿಬ್ಬು ಮಾಡಿ, ನುಗ್ಗಿಯೇ ಬಿಟ್ಟವು. ಸ್ಕೂಲ್ ಮುಗಿದ ಮೇಲೆ ಸ್ವಲ್ಪಹೊತ್ತು ಆಟವಾಡಿ, ಆಮೇಲೆ ಮನೆಗಳಿಗೆ ಹಿಂತಿರುಗುತ್ತಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಎದುರು ಬಂದ ಕಾರುಗಳ ವೇಗಕ್ಕೆ ತತ್ತರಿಸಿದರು. ಗೊಂದಲಗೊಂಡ ಗುಂಪು ಅತ್ತಿತ್ತ ಸರಿಯಿತಾದರೂ ಇಕ್ಕಟ್ಟಿಗೆ ಸಿಕ್ಕಿದ ಲಕ್ಷ್ಮಿಗೆ ವಿದೇಶಿ ಕಾರು ಡಿಕ್ಕಿ ಹೊಡೆಯಿತು. ಲಕ್ಷ್ಮಿ ಪಕ್ಕಕ್ಕೆ ಬಿದ್ದಾಗ ಕಾರುಗಳು ನಿಲ್ಲಲಿಲ್ಲ. ತಮ್ಮ ಪಾಡಿಗೆ ತಾವು ಹೊರಟೇ ಹೋದವು. ಇಲ್ಲಿ ಭುಗಿಲೆದ್ದ ಹಾಹಾಕಾರವನ್ನು ಕೇಳಿಸಿಕೊಂಡವರು ಓಡಿ ಬಂದರು. ಅವರಲ್ಲಿ ಪುಟ್ಟಕ್ಕಯ್ಯನೂ ಸೇರಿದ್ದಳು. ಲಕ್ಷ್ಮಿ ಬಿದ್ದಿರುವುದನ್ನು ನೋಡಿದ ಕೂಡಲೇ ಕರಿಯಮ್ಮನನ್ನು ಕರೆತರಲು ಬಂದಿದ್ದಳು.

ಇತ್ತ ಶಿವಕುಮಾರ್ ಮತ್ತು ಸಿದ್ದಣ್ಣನಿಗೆ ಗೊತ್ತಾಗಿ ಓಡಿಬಂದರು. ಮೂರ್ಛೆ ಬಿದ್ದಿದ್ದ ಲಕ್ಷ್ಮಿಗೆ ಎಚ್ಚರವಿರಲಿಲ್ಲ. ಪೆಟ್ಟಾಗಿ ರಕ್ತ ಚಿಮ್ಮುತ್ತಿದೆ. ಊರಲ್ಲಿ ಆಸ್ಪತ್ರೆಯಿಲ್ಲ. ಹಾಗೆಂದು ಸುಮ್ಮನಿರುವಂತಿಲ್ಲ. ಕೂಡಲೇ ಊರಲ್ಲಿದ್ದ ಪರಿಚಯಸ್ಥರ ಮೋಟಾರುಬೈಕು ತರಿಸಿದ. ತಾನು ಹಿಂದೆ ಕೂತು ಹೆಗಲಮೇಲೆ ಲಕ್ಷ್ಮಿಯನ್ನು ಹೊತ್ತುಕೊಂಡು ಪಕ್ಕದೂರಿನ ಆಸ್ಪತ್ರೆಗೆ ಹೊರಟ. ಸಿದ್ದಣ್ಣನಿಗೆ ತಡೆಯಲಾಗಲಿಲ್ಲ. ಯಾರಾದ್ರು ತನ್ನನ್ನು ಕರೆದುಕೊಂಡು ಹೋಗಿ ಎಂದು ಕೇಳಿಕೊಂಡ. ಹೆಡ್‌ಮಾಸ್ಟರು ತಮ್ಮ ಸೈಕಲ್ ತಂದು ಹಿಂದೆ ಕೂತುಕೊಳ್ಳಲು ಹೇಳಿದರು. ತಾವೇ ತುಳಿದುಕೊಂಡು ಹೊರಟರು.

ಎಲ್ಲ ವಿಷಯ ಕೇಳಿದ ಕರಿಯಮ್ಮ ಮತ್ತಷ್ಟು ಅಳತೊಡಗಿದಳು. ‘ನನ್ ಮಗಳನ್ನ ನಾನ್ ನೋಡ್ಬೇಕು’ ಎಂದು ಗೋಳಿಟ್ಟಳು. ಮಂಜುಳ – ಸಾಕಷ್ಟು ಸಾಂತ್ವನ ಹೇಳಿದಳು. ಅಲ್ಲಿದ್ದ ಎಲ್ಲರೂ ಲಕ್ಷ್ಮಿಗೆ ಏನೂ ಆಗುವುದಿಲ್ಲವೆಂದು ಮತ್ತೆ ಮತ್ತೆ ಹೇಳಿದರು. ಒತ್ತಾಯಪೂರ್ವಕವಾಗಿ ಕರಿಯಮ್ಮನನ್ನು ಮನೆಗೆ ಕರೆತಂದರು.

‘ಕರಿಯಮ್ಮನ ಗೋಳಾಟದಿಂದ ಊರಿಂದೂರೇ ದುಗುಡಗೊಂಡಿತು. ಲಕ್ಷ್ಮಿಗೆ ಅಪಾಯವಿಲ್ಲವೆಂದು ಗೊತ್ತಿದ್ದರೂ ಈಕೆಯ ಆತಂಕ ಕಟ್ಟೋಡೆದು ಹರಡಿ ಎಲ್ಲರಲ್ಲೂ ಮಂಕು ಕವಿದಿತ್ತು. ಹೀಗಾಗಿ ಅಪಘಾತಕ್ಕೆ ಕಾರಣವಾದ ಕಾರುಗಳ ಬಗ್ಗೆ, ಅದರಲ್ಲಿದ್ದ ವ್ಯಕ್ತಿಗಳ ಬಗ್ಗೆ ಚರ್ಚೆ ಪ್ರಾರಂಭವಾಯಿತು. ವಿದೇಶಿ ಕಂಪನಿಯು ಬರಡುಸಂದ್ರದಲ್ಲಿ ತಳ ಊರುವ ಸೂಚನೆ ಸಿಕ್ಕಿ ಕೆಲವರಿಗೆ ವಿಶೇಷ ಕುತೂಹಲವುಂಟಾದರೆ, ಅನೇಕರಿಗೆ ಇನ್ನೆಷ್ಟು ಅಪಘಾತಗಳು ಕಾದಿವೆಯೋ ಎಂಬ ಅಳುಕು. ವಿಷಯವನ್ನು ಸರಿಯಾಗಿ ಕೇಳೋಣವೆಂದರೆ ಪಟೇಲನೂ ಇರಲಿಲ್ಲ. ಅವನೂ ಕಾರಲ್ಲಿ ಹೋಗಿದ್ದ.

ಚಾವಡಿ ಕಟ್ಟೆಯಲ್ಲಿ ಕೂತು ಈ ವಿಷಯಗಳ ಬಗ್ಗೆ ಹರಟೆ ಕೊಚ್ಚುತ್ತ ಕೂತವರಲ್ಲಿ ವಿಶೇಷ ಸುದ್ದಿಗಳು ಚರ್ಚಿತವಾಗುತ್ತಿದ್ದವು. ಸ್ವಪ್ನ ಮಂಟಪದ ಬಳಿ ತನಗಿದ್ದ ಸ್ವಲ್ಪ ಜಮೀನಿನ ಅಕ್ಕಪಕ್ಕದ ಜಮೀನನ್ನು ಕೆಲವೇ ದಿನಗಳ ಹಿಂದೆ ಪಟೇಲ ರಿಜಿಸ್ಟರ್ ಮಾಡಿಸಿಕೊಂಡನೆಂಬುದು ಒಂದು ಸುದ್ದಿ. ಅದು ನಿಜ ಎಂಬುದನ್ನು ಪಟೇಲನಿಗೆ ಎರಡು ಎಕರೆ ಜಮೀನು ಮಾರಿದ್ದ ಒಬ್ಬಾತ ಅಲ್ಲಿಯೇ ಖಚಿತಪಡಿಸಿದ. ಪಟೇಲನಿಗೆ ಹಣ ಕೊಟ್ಟು ಕೈಜೋಡಿಸಿದ್ದಾನೆಂದು ಶಾಸಕನ ಬಗ್ಗೆಯೂ ಮಾತು ಬಂತು. ವಿದೇಶಿ ಕಂಪನಿಯಿಂದ ಸಕತ್ತಾಗಿ ದುಡ್ಡು ಹೊಡೆಯಲು ಮುಂಚೆಯೇ ಲೆಕ್ಕಾಚಾರ ಹಾಕಿ ಈ ಜಮೀನುಗಳನ್ನು ಖರೀದಿಸಿದ್ದಾರೆಂದು ಖಚಿತವಾಯಿತು. ಇತ್ತೀಚೆಗೆ ಶಾಸಕರು ಈ ಊರಿಗೆ ಹೆಚ್ಚು ಬಂದು ಹೋಗುತ್ತಿದ್ದುದು ಇದೇ ಕಾರಣಕ್ಕಿರಬಹುದೆಂದು ಅಲ್ಲಿದ್ದವರೆಲ್ಲ ಭಾವಿಸಿದರು. ಶಾಸಕರು ಬಂದಾಗಲೆಲ್ಲ ಊರಿನ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದರು. ಬರಡುಸಂದ್ರದ ಹೆಸರನ್ನು ಬದಲಾಯಿಸುವಂತೆ ಊರಿನ ಅಭಿವೃದ್ಧಿ ಆಗಬೇಕೆಂದು ಪ್ರತಿಪಾದಿಸಿ ಊರಿನ ಸಹಕಾರವನ್ನು ಕೇಳುತ್ತಿದ್ದರು. ಆದರೆ ಅಂದಿನ ಮಾತುಗಳ ಅರ್ಥ ಅಷ್ಟಿಷ್ಟು ಗೊತ್ತಾಗತೊಡಗಿದ್ದು ಈಗಲೇ.

‘ಹೊರಗಿನೋರು ಬಂದ್ರೆ ನಮ್ಮೂರು ಅಂದ ಚೆಂದ ಹೆಚ್ಚಾಗ್ತೈತೆ ಬಿಡಲೇ’ ಎಂದು ಒಂದಿಬ್ಬರು ಖುಷಿಗೊಂಡು ಹೇಳಿದಾಗ ಅನೇಕರು ಅದನ್ನು ಒಪ್ಪಲಿಲ್ಲ. ‘ಹೊಟ್ಟೆಗೆ ಹಿಟ್ಟಿಲ್ಲಿದೆ ಜುಟ್ಟಿಗೆ ಮಲ್ಲಿಗೆ ಹೂವು ಅನ್ನಂಗಾಗೈತೆ’ ಎಂದರು. ಕೆಲವರು ತಂತಮ್ಮ ಜಮೀನಿನ ಬೆಲೆ ಹೆಚ್ಚಾಗಬಹುದೆಂದು ಲೆಕ್ಕಹಾಕಿ ಯಾವ ಕಂಪ್ನಿ ಆದ್ರೇನು. ಬರ್‍ಲಿ ಬಿಡ್ರಯ್ಯ’ ಎಂದರು. ಈ ಊರಲ್ಲಿ ಜಮೀನಿಲ್ಲದವರೇ ಜಾಸ್ತಿಯಾದ್ದರಿಂದ ಇಂಥ ಮಾತುಗಳಿಗೆ ಸಾರ್ವತ್ರಿಕ ನೆಲೆ ಸಿಗುವ ಸಂಭವವಿರಲಿಲ್ಲ.

ಒಟ್ಟಿನಲ್ಲಿ ಇದ್ದಕ್ಕಿದ್ದಂತೆ ಊರಲ್ಲಿ ವಿಚಿತ್ರ ವಾತಾವರಣ ಉಂಟಾಗಿತ್ತು. ಅಲ್ಲಲ್ಲೇ ನಡೆಯುತ್ತಿದ್ದ ಊಹಾಪೋಹಗಳ ಜೊತೆಗೆ ಕೆಲವರು ಕರಿಯಮ್ಮನ ಬಳಿಗೆ ಬಂದು ಸಮಾಧಾನ ಹೇಳಿ ಹೋಗುತ್ತಿದ್ದರು. ಬೀದಿಯ ಹೆಂಗಸರಂತೂ ಆಕೆಯ ಬಳಿಯೇ ಕೂತುಬಿಟ್ಟಿದ್ದರು.

ರಾತ್ರಿ ಎಂಟು ಗಂಟೆ ಮೀರಿದರೂ ಶಿವಕುಮಾರ್‌ ಮತ್ತು ಸಿದ್ದಣ್ಣ ಲಕ್ಷ್ಮಿಯನ್ನು ಕರೆತರಲಿಲ್ಲ. ಆಗ ಸಮಾಧಾನಿಸುತ್ತಿದ್ದವರಲ್ಲೂ ಚಡಪಡಿಕೆ ಪ್ರಾರಂಭವಾಯಿತು.

ಮಂಜುಳಾಗೆ ನಿಂತಲ್ಲಿ ನಿಲ್ಲಲಾಗಲಿಲ್ಲ. ಅಳುತ್ತಿದ್ದ ಕರಿಯಮ್ಮನನ್ನು ಸಮಾಧಾನಿಸಲು ಕೇರಿಯವರೆಲ್ಲ ಬಂದದ್ದರಿಂದ ತಾನು ಅಡಿಗೆ ಮನೆಗೆ ಹೋಗಿ ಕಾಫಿ ಮಾಡಿ ತಂದು ಒತ್ತಾಯದಿಂದ ಕರಿಯಮ್ಮನಿಗೆ ಕುಡಿಸಿದ್ದಳು. ಅನಂತರ ಅನ್ನಕ್ಕೂ ಇಟ್ಟಿದ್ದಳು. ಎಷ್ಟು ಹೊತ್ತಾದರೂ ಲಕ್ಷ್ಮಿಯನ್ನು ಕರೆತರದೇ ಇದ್ದಾಗ ತಾನೂ ಅಲ್ಲಿದ್ದವರೊಂದಿಗೆ ಕೂತು ಮಾತಿಗೆ ತೊಡಗಿದಳು. ವಿಚಾರಿಸಲು ಬಂದ ಗಂಡಸರನೇಕರು ಮೇಡಂ ಜೊತೆ ಮಾತಾಡುವ ಸುಯೋಗ ಸಿಕ್ಕಿ ಅಲ್ಲಿಯೇ ಕುಳಿತರು. ತಮಗೆ ಗೊತ್ತಿರುವ ಅಷ್ಟಿಷ್ಟು ಸುದ್ದಿಯನ್ನು ರಂಜಕವಾಗಿ ಹೇಳುತ್ತ ಹೋದರು. ಪಟೇಲ ಮತ್ತು ಶಾಸಕ ಇಬ್ಬರೂ ಸೇರಿ ವಿದೇಶಿ ಕಂಪನಿಗೆ ಜಮೀನು ಮಾರುವ ವಿಷಯವನ್ನು ತಮಗೆ ತಿಳಿದ ರೀತಿಯಲ್ಲಿ ವಿವರಿಸಿದರು. ಬಹುಬೇಗ ಸುದ್ದಿಯನ್ನು ಸ್ಫೋಟಗೊಳಿಸುತ್ತಿರುವ ಸಂಭ್ರಮ ಅವರಲ್ಲಿತ್ತು

ಮಂಜುಳಾಗೆ ಈ ಊರಿಗೆ ಒದಗುವ ಅಪಾಯದ ಮುನ್ಸೂಚನೆ ಸಿಕ್ಕಿತು. ವಿದೇಶಿ ಬಂಡವಾಳವನ್ನು ತೊಡಗಿಸಲು ಮಿತಿಮೀರಿ ಅವಕಾಶ ಕಲ್ಪಿಸಿ ನಮ್ಮ ದೇಶದ ಆರ್ಥಿಕ ಪದ್ಧತಿಯ ನಿಯಂತ್ರಣಕ್ಕೆ ವಿದೇಶಿಯರಿಗೆ ಸದಾವಕಾಶ ಕಲ್ಪಿಸುವುದರಿಂದ ಆಗುವ ಅನಾಹುತಗಳು ಅಂತರಂಗಕ್ಕೆ ತಟ್ಟಿದವು. ಸಮಾಜ ಬದಲಾವಣೆಯ ಅವಳ ಕ್ರಿಯೆಗೆ ತೊಡಗಬೇಕಾದ ಜನ ಸಕಲ ಸಮಸ್ಯೆಗಳಿಗೂ ವಿದೇಶಿ ಬಂಡವಾಳದಲ್ಲಿ ಪರಿಹಾರ ಕಂಡುಕೊಳ್ಳುವ ಭ್ರಮೆಯಿಂದ ಈ ಜನರನ್ನು ದೂರ ಮಾಡುವುದು ಮುಖ್ಯ ಅನ್ನಿಸಿತು. ವಿದೇಶಿ ಸಾಲ ತರುವುದು ಬೇರೆ, ಅವರಿಗಾಗಿಯೇ ರತ್ನಗಂಬಳಿ ಹಾಸಿ ಭೂಮಿ ಕಾಣಿಯನ್ನು ಅವರ ಪಾದದ ಬಳಿಯಿಟ್ಟು, ಅವರಿಗಾಗಿಯೇ ಉತ್ಪಾದನೆ ಮಾಡಿ, ಮಾಲು-ಮನಸ್ಸು-ಮೆದುಳುಗಳನ್ನು ಮಾರಿಕೊಳ್ಳುವುದು ಬೇರೆ ಎಂಬ ಅರಿವು ಅವಳಿಗಿತ್ತು. ಈ ಸಂದರ್ಭವನ್ನು ಬಳಸಿಕೊಂಡು ಅಲ್ಲಿ ಕೂತಿದ್ದ ಜನರಿಗೆ ಅರ್ಥವಾಗುವಂತೆ ತನ್ನ ವಿಚಾರವನ್ನು ವಿವರಿಸತೊಡಗಿದಳು. ಯಾರೊ ಕೆಲವರಿಗೆ ಅನುಕೂಲವಾಗಿ ಆನಂತರ ಇಡೀ ಹಳ್ಳಿಯೇ ವಿಚಿತ್ರ ವಿನಾಶದ ಕಡೆಗೆ ಸಾಗೀತು ಎಂಬ ಎಚ್ಚರಿಕೆಯ ಮಾತನ್ನೂ ಹೇಳಿದಳು. ವಿದೇಶಿಯರ ಜೀವನಶೈಲಿಯಿಂದುಂಟಾಗುವ ಸಾಮಾಜಿಕ-ಆರ್ಥಿಕ ಪರಿಣಾಮವಲ್ಲದೆ ಸ್ಥಳೀಯ ಸಂಸ್ಕೃತಿಯ ಮೇಲೆ ಆಗುವ ಅನಾಹುತವನ್ನು ಸರಳ ಮಾತುಗಳಲ್ಲಿ ಹೇಳುತ್ತಿದ್ದಾಗ ಜೀಪೊಂದು ಬಂದು ನಿಂತಿತು.

ಜೀಪಿನಿಂದ ಶಿವಕುಮಾರ್ ಮೊದಲು ಇಳಿದ. ಸಿದ್ದಣ್ಣ ಇಳಿದ. ಹೆಡ್‌ಮಾಸ್ಟರ್ ತಮ್ಮ ಸೈಕಲ್ ಇಳಿಸಿಕೊಂಡರು. ಅನಂತರ ಲಕ್ಷ್ಮಿಯನ್ನು ಇಳಿಸಿಕೊಂಡರು. ಲಕ್ಷ್ಮಿಯನ್ನು ನೋಡಿದ ಕೂಡಲೆ ಕರಿಯಮ್ಮ ಎದ್ದು ಓಡಿದಳು. ಮಗಳನ್ನು ಮುದ್ದಾಡಿದಳು.

ಎಲ್ಲರೊಂದಿಗೆ ನಡೆದುಕೊಂಡು ಬಂದ ಲಕ್ಷ್ಮಿಯನ್ನು ನೋಡಿ ಅಲ್ಲಿದ್ದವರೆಲ್ಲ ನಿಟ್ಟುಸಿರುಬಿಟ್ಟರು.

ಶಿವಕುಮಾರ್‌ ಬಂದವನು ಹಜಾರದಲ್ಲಿ ಕೂತು ತಾನು ಆಸ್ಪತ್ರೆಗೆ ಕರೆದೊಯ್ದದ್ದರಿಂದ ಹಿಡಿದು ಬರುವವರೆಗಿನ ವಿವರಗಳನ್ನು ಕೊಟ್ಟ. ಅಂಥ ವಿಶೇಷ ಪೆಟ್ಟು ಬಿದ್ದಿಲ್ಲವೆಂದು ಡಾಕ್ಟರು ತಿಳಿಸಿದ್ದರು. ಗಾಬರಿಯಿಂದ ಮೂರ್ಛೆ ಹೋಗಿರುವುದಾಗಿ ಹೇಳಿದ್ದರು. ಚಿಕಿತ್ಸೆ ನೀಡಿ ತಮ್ಮ ಜೀಪಿನಲ್ಲೇ ವಾಪಸ್ ಕಳಿಸಿದ್ದರು. ಕುಮಾರನ ಮಾತೆಲ್ಲ ಮುಗಿದ ಮೇಲೆ ಮಂಜುಳ ಇಲ್ಲಿಯ ವಿಷಯ ತಿಳಿಸಿದಳು. ತಕ್ಷಣ ಕುಮಾರ್ ಸಿಟ್ಟಿಗೆದ್ದ.

`ಈ ಊರಿನ ಮುಖಂಡ್ರಿಗೆ ಆಸ್ಪತ್ರೆ ಕಟ್ಟೋಕೆ ಜಮೀನ್ ಕೊಡೋಕಾಗಲ್ಲ. ಯಾರೋ ಕೇಳ್ದಷ್ಟ್ ಕೊಡ್ತಾರೆ ಅಂದ್ರೆ ಕಾಲಿಗೆ ಬಿದ್ದು ಕೊಡ್ತಾರೆ. ಜನರ ಜೀವಕ್ಕಿಂತ ಇವ್ರ್‌ಗೆಲ್ಲ ಜೇಬು ತುಂಬೋದೆ ಮುಖ್ಯ ಆಯ್ತು.’ ಎಂದು ರೇಗಾಡಿದ.

ಕೂಡಲೇ ಸಿದ್ದಣ್ಣ ಒಳಗಿನಿಂದ ಬಂದು ಹೇಳಿದ. `ನಿನಗಿದೆಲ್ಲ ಯಾಕಪ್ಪ ಊರ್ ಉಸಾಬರಿ. ತಿಳ್ದೋರು ತಿಳ್ದಂಗ್ ಮಾಡ್ಕಂಬ್ತಾರೆ; ಮಾಡ್ಕಂಡೋಗ್ಲಿ. ಸದ್ಯ ನಮ್ಮ ಲಕ್ಷ್ಮೀಗೇನು ಆಗ್ಲಿಲ್ವಲ್ಲ!’

`ಹಾಂಗದ್ಕಂಡ್ ಸುಮ್ನಿರೋಕಾಗುತ್ತ? ನಮ್ಮೂರಲ್ಲೇ ಆಸ್ಪತ್ರೆ ಇದ್ದಿದ್ರೆ ಇಷ್ಟೊಂದು ಕಷ್ಟ ಇರ್ತಿತ್ತ? ಇಷ್ಟೊಂದು ಆತಂಕ ಇರ್ತಿತ್ತ? ಆಸ್ಪತ್ರೆಗಾದ್ರೆ ಅಂಗೈಯಗಲ ಕೊಡಲ್ಲ. ಯಾವ್ದೊ ವಿದೇಶಿ ಕಂಪೆನಿ ಕಾಸು ಚೆಲ್ಲಿದ್ರೆ ನಾಲ್ಗೆನಾಗ್ ನೆಕ್ಕತ್ತಾರೆ’ ಎಂದು ಶಿವಕುಮಾರ್ ತೀವ್ರವಾಗಿ ಪ್ರತಿಕ್ರಿಯಿಸಿದ. ಅಷ್ಟೇ ಅಲ್ಲ `ಒಂದು ವೇಳೆ ಈ ಅಪಘಾತದಲ್ಲಿ ನಮ್ಮ ಲಕ್ಷ್ಮಿ ಸತ್ತೇಹೋಗಿದ್ರೆ ಏನ್‌ಗತಿ’ ಎಂದೂ ಕೇಳಿದ. ಸಿದ್ದಣ್ಣ ಬಿಡ್ತು ಅನ್ನೋ, ಏನೇನೋ ಅಪದ್ಧ ಮಾತಾಡ್ಬೇಡ’ ಎಂದು ಗದರಿದ. ಆದರೆ ಶಿವಕುಮಾರ್ ಸುಮ್ಮನಾಗಲಿಲ್ಲ. ಒಂದು ವೇಳೆ ಇನ್ನೇನಾದ್ರೂ ಆಗಿದ್ರೇನ್ ಗತಿ ಅಂತ ಹೇಳ್ದೆ. ಇವತ್ತು ಲಕ್ಷ್ಮಿಗೆ ಅಂಥಾದ್ದೇನು ಆಗ್ಲಿಲ್ಲ. ಆದ್ರೆ ಉಳಿದೋರ್ಗೆ ಆಗೊಲ್ಲ ಅನ್ನೋದೇನ್ ಗ್ಯಾರಂಟಿ’ ಎಂದು ಪ್ರಶ್ನಿಸಿದಾಗ ಅಲ್ಲಿ ನಿಂತಿದ್ದ ಅನೇಕರಿಗೆ ಹೌದು ಎನ್ನಿಸಿತು. ಇದೇ ಸಮಯವನ್ನು ಬಳಸಿಕೊಂಡು ಮಂಜುಳ ಚಿಕ್ಕದಾಗಿ ತನ್ನ ವಿಚಾರಧಾರೆಯನ್ನು ಮಂಡಿಸಿದಳು. ಇದೇತಾನೆ ಲಕ್ಷ್ಮಿಗೆ ಚಿಕಿತ್ಸೆ ಕೊಡಿಸಿಕೊಂಡು ಬಂದ ಶಿವಕುಮಾರನಿಗೆ ಮಂಜುಳಾಗೆ ಇದ್ದ ವಿಚಾರಗಳೆಲ್ಲ ಇಲ್ಲದಿದ್ದರೂ ತಳಮಳದ ತೀವ್ರತೆಯಲ್ಲಿ ಆಕೆಯ ಮಾತುಗಳು ಸರಿಯೆನ್ನಿಸಿದವು. `ಇದನ್ನ ಇಷ್ಟಕ್ಕೆ ಬಿಡಬಾರ್ದು. ಆಸ್ಪತ್ರೆ, ಶಾಲೆ ಇಂಥಾದಕ್ಕೆ ಜಾಗ ಇರೊಲ್ಲ. ದುಡ್ಡು ಸುರ್ಯೊ ದೊಡ್ಡಪ್ಪಗಳಿಗೆ ಎಲ್ಲಾ ಇರುತ್ತೆ’ ಎಂದು ಮತ್ತೆ ಹೇಳಿದ. ಜೊತೆಗೆ ಲಕ್ಷ್ಮಿಗೆ ಚಿಕಿತ್ಸೆ ಕೊಡಿಸಲು ತಡವಾದದ್ದರಿಂದ ಉಂಟಾದ ದುಷ್ಪರಿಣಾಮದ ಬಗ್ಗೆ ಡಾಕ್ಟರ ಮಾತುಗಳನ್ನು ಜ್ಞಾಪಿಸಿಕೊಂಡು ಹೇಳಿದ. `ರಕ್ತ ಸುರಿಯೋದನ್ನು ಬೇಗ ನಿಲ್ಲಿಸಿದ್ರೆ ನಿಶ್ಯಕ್ತಿ ಕಡಿಮೆ ಆಗೋದು. ಈಗ ನಾಳೇನೆ ಪಟ್ಟಣಕ್ಕೆ ದೊಡ್ಡ ಆಸ್ಪತ್ರೆಗೆ ಕರ್ಕಂಡ್ ಹೋಗಿ ಒಂದ್ಸಾರಿ ತೋರ್ಸಿ’ ಎಂದು ಡಾಕ್ಟರು ಸಲಹೆ ಕೊಟ್ಟಿದ್ದರು.

ಒಳಗೆ ಕರಿಯಮ್ಮ ಲಕ್ಷ್ಮಿಯನ್ನು ಮಲಗಿಸಿ ಸಂತೈಸುತ್ತಿದ್ದಳು. ಹೊರಗಡೆ ವಿಷಯದ ನಾನಾ ಸೆಲೆಗಳು ಮಾತಾಗಿ ಹೊಮ್ಮುತ್ತಿದ್ದವು.

ಶಿವಕುಮಾರನಿಗೆ ಹೊಸ ಲೋಕವೊಂದನ್ನು ಕಂಡಂತಾಗಿತ್ತು. ತನಗೆ ಆದ ಅನುಭವ, ಮಂಜುಳಾ ವಿಚಾರದ ಅರಿವು ಮತ್ತು ಅಲ್ಲಿಗೆ ಬಂದಿದ್ದ ಬಡಜನರ ಅಭಿಪ್ರಾಯಗಳೆಲ್ಲ ಒಟ್ಟಿಗೆ ಸೇರಿ ಹೊಸ ಚರಿತ್ರೆಯೊಂದರ ಪರಿಚಯವಾಗತೊಡಗಿತ್ತು. ಮುಂದೆ ಸ್ವಪ್ನ ಮಂಟಪದ ಅಸ್ತಿತ್ವಕ್ಕೇ ಅಪಾಯ ಒದಗುವುದನ್ನು ಕಲ್ಪಿಸಿಕೊಂಡು ಕಳವಳಿಸಿದ. ಆದರೆ ಅದನ್ನು ಹೇಗೆ ಹೇಳುವುದೆಂದು ಒಳಗೇ ಒದ್ದಾಡುತ್ತಿದ್ದಾಗ ಮಂಜುಳ ತಾನೇ ಹೇಳಿದಳು.

`ಸ್ವಪ್ನ ಮಂಟಪ ಒಂದು ಚಾರಿತ್ರಿಕ ಸ್ಮಾರಕ ಅಲ್ಲದೆ ಇರಬಹುದು. ಈ ಮಂಟಪದ ಸುತ್ತ ಇರೊ ಸಂಗತಿಗಳು ಸುಳ್ಳೇ ಇರಬಹುದು. ಆದರೆ ಈ ಊರಿಗೂ ಅದಕ್ಕೂ ಇರೊ ಸಂಬಂಧ ಸುಳ್ಳಲ್ಲ. ಅದೊಂದು ಕನಸುಗಾರಿಕೆಯ ಕೇಂದ್ರವಾಗಿದೆ ಅನ್ನೋದು ಸುಳ್ಳಲ್ಲ ಆದ್ರಿಂದ ಅದನ್ನ ಉಳಿಸ್ಕೊಳ್ಳಲೇಬೇಕು.’

ಶಿವಕುಮಾರ್‌ ಮಂಜುಳಾ ಮಾತಿನಿಂದ ಉತ್ತೇಜಿತನಾದ. ತನ್ನದಲ್ಲದ ನೆಲೆಯಿಂದ ತನ್ನ ಇಷ್ಟದ ಸ್ಥಳವೊಂದನ್ನು ಸಮರ್ಥಿಸಿದ್ದು ಆತನಿಗೆ ಖುಷಿಕೊಟ್ಟಿತು. ಅಷ್ಟೇ ಅಲ್ಲ ಆಕೆ ಹೇಳುತ್ತಿರುವ ವಿಷಯವೇ ನಿಜಕ್ಕೆ ಹತ್ತಿರ ಎನ್ನಿಸತೊಡಗಿತು.

ಮಾರನೇ ದಿನ ಪಟೇಲನ ಬಳಿಗೆ ಹೋಗಿ ವಾದ ಮಾಡಿದ. `ಒಬ್ಬ ಹುಡುಗೀಗೆ ಕಾರು ಬಡಿದಾಗ ನಿಲ್ಲದೆ ಹೋದವರಿಗೆ ಊರಿನ ಅಭಿವೃದ್ಧಿ ಬಗ್ಗೆ ಮಾತಾಡೊ ಹಕ್ಕಿಲ್ಲ’ ಎಂದ. `ಈ ಊರಿನ ಒಂದಂಗುಲ ಜಮೀನೂ ಆ ವಿದೇಶಿ ಕಂಪನಿಗೆ ಹೋಗಬಾರದು’ ಎಂದು ಎಚ್ಚರಿಸಿದ. ಕೂಡಲೇ ಪಟೇಲ ತಿರುಗಿಬಿದ್ದ. `ನಿನ್ನ ಜಮೀನ್ ವಿಷ್ಯ ಆದ್ರೆ ಏನಾದ್ರೂ ಮಾಡ್ಕೊ. ನನ್ನ ಜಮೀನ್ ವಿಷ್ಯ ಮಾತಾಡೋಕೆ ನೀನ್ ಯಾರಯ್ಯ ಆ ಮೇಡಂ ಏನೊ ಹೇಳಿದಳು ಅಂಬ್ತ ಬಂದ್‌ ಬಿಟ್ಟ ಇಲ್ಲಿ ಸರದಾರ. ವಿದ್ಯೆ ಬುದ್ಧಿ ಕಲ್ತೋನು ಹಳ್ಳಿ ಮುಕ್ಕುನ್ ಥರಾ ವಾದ ಮಾಡ್ತೀಯಲ್ಲಯ್ಯ? ಇಲ್ಲಿ ಕಾರ್ಖಾನೆ ಆದ್ರೆ ನೀನೂ ಕೆಲ್ಸಕ್ ಸೇರು, ಯಾರ್ ಬೇಡ ಅಂದ್ರು. ತತ್ವಗಿತ್ವ ಹೇಳಾದ್ ಬಿಟ್ಟು ಬದುಕೋದ್ ಕಲಿ’ ಎಂದು ಒಂದೇ ಉಸಿರಿನಲ್ಲಿ ಮಾತನಾಡಿದ.

`ನಿಮ್ಮ ಜಮೀನ್ ಏನಾರ ಮಾಡ್ಕೊಳ್ಳೋಕೆ ನಿನಗೆ ಹಕ್ಕಿರಬಹುದು. ಆ ಸ್ವಪ್ನಮಂಟಪ ನಿಮ್ಮದಲ್ವಲ್ಲ’ – ಕುಮಾರ್ ಕೇಳಿದ.

`ನಿಂದೂ ಅಲ್ವಲ್ಲ’ – ಪಟೇಲ ಉತ್ತರಿಸಿದ.

`ನಂದೂ ಅಲ್ಲ ನಿಮ್ದೂ ಅಲ್ಲ. ಇಡೀ ಊರಿಂದು. ಅದಕ್ಕೇ ಅದನ್ನ ಉಳಿಸ್ಕೊಬೇಕು.’ ಎಂದ ಕುಮಾರ್.

`ಅದನ್ನ ಯೋಚ್ನೆ ಮಾಡಾನ ಹೋಗಯ್ಯ, ಏನ್ ಇವತ್ತೆ ಬುಲ್ಡೋಜರ್ ಹೊಡೀತಾರ? ನಿಂದೊಳ್ಳೆ ಕತೆ ಆಯ್ತಲ್ಲ? ಎಂದು ಪಟೇಲ ಸಮಾಧಾನದ ದನಿಯಲ್ಲಿ ಹೇಳಿದಾಗ ಶಿವಕುಮಾರ `ಒಟ್ನಲ್ಲಿ ಮಂಟಪ ಇರ್ಬೇಕು’ ಎಂದು ಹೇಳಿ ಬಂದ.

ಶಿವಕುಮಾರನಿಗೆ ಇನ್ನೂ ಮಂಟಪದಾಚೆಗೆ ಪೂರ್ಣ ಚಿಂತನೆ ಮಾಡುವುದು ಸಾಧ್ಯವಾಗುತ್ತಿಲ್ಲವೆಂಬ ಅನುಮಾನ ಬರಲು ಮಂಜುಳಾಗೆ ಇಷ್ಟು ಸಾಕಿತ್ತು. ಎಲ್ಲವೂ ಒಂದೇ ದಿನದಲ್ಲಿ ಬದಲಾಗದೆಂಬ ಅರಿವು ಆಕೆಗಿತ್ತು. ಒಟ್ಟಿನಲ್ಲಿ ಲಕ್ಷ್ಮಿಯ ಘಟನೆಯಿಂದ ಕುಮಾರನ ಕೆಲವು ಭ್ರಮೆಗಳು ಬಿಟ್ಟು ಹೋಗಿರುವುದಂತೂ ಖಚಿತವಾಗಿತ್ತು. ಶಿವಕುಮಾರನಂತೆಯೇ ಈಕೆಗೂ ಮಂಟಪದ ಮಹತ್ವದ ಬಗ್ಗೆ ಗೌರವವಿತ್ತು. ಅದರ ಸುತ್ತ ಹುಟ್ಟಿದ ಮೌಡ್ಯಕ್ಕೆ ಈಕೆ ವಿರುದ್ಧವಾಗಿದ್ದರೂ ಅದೊಂದು ಕನಸುಗಾರಿಕೆಯ ಪ್ರತೀಕವಾಗಿ ಜನಮನದಲ್ಲಿ ರೂಪುಗೊಂಡಿದ್ದರ ಬಗ್ಗೆ ರೋಮಾಂಚನವಿತ್ತು, ಚಂಡೇರಾಯನ ಕಿರಿಯ ರಾಣಿ ಮತ್ತು ಮಗಳ `ಕತೆ’ ಯ ವಿವರಗಳೆಲ್ಲ ಸತ್ಯವೊ, ಸುಳ್ಳೋ ಎನ್ನುವುದಕ್ಕಿಂತ ಅವರ ಸ್ವತಂತ್ರ ಮನಸ್ಸಿನ ತಾಣವಾಗಿ, ಕನಸು ಗರಿ ಬಿಚ್ಚಿದ ಕೇಂದ್ರವಾಗಿ, ಈ ಸ್ವಪ್ನ ಮಂಟಪದ ಐತಿಹ್ಯ ಬೆಳೆದದ್ದರ ಬಗ್ಗೆ ಆಕೆಗೆ ವಿಶೇಷ ಬಲವಿತ್ತು. ಹೀಗಾಗಿ ಅದು ಉಳಿಯಬೇಕೆಂಬುದು ಆಕೆಯ ಅಭೀಪ್ಸೆಯೂ ಆಗಿತ್ತು.

ಮಾರನೇ ದಿನ, ಮಂಜುಳಾ ತರಗತಿಯಲ್ಲಿ ಪಾಠ ಮಾಡುತ್ತಿದ್ದಳು. ಜವಾನ ಬಂದು ಒಂದು ಚೀಟಿಯನ್ನು ಕೊಟ್ಟ. ಓದಿಕೊಂಡು ಮತ್ತೆ ಪಾಠವನ್ನು ಮುಂದುವರೆಸಿದಳು. ಆವತ್ತಿನ ಪಾಠ ಚಾರಿತ್ರಿಕ ಸ್ಮಾರಕಗಳ ಬಗ್ಗೆ ಇದ್ದುರಿಂದ ಮಕ್ಕಳಿಗೆ ತಿಳಿಯುವಂತೆ ತಿಳಿಭಾಷೆಯಲ್ಲಿ ಚರಿತ್ರೆ, ಐತಿಹ್ಯ, ಪುರಾಣಗಳ ಬಗ್ಗೆ ಹೇಳುತ್ತಿದ್ದಳು. ವಿದ್ಯಾರ್ಥಿ ವಿದ್ಯಾರ್ಥಿನಿಯರ ಅರಿವ ಶಕ್ತಿಯನ್ನು ಅರಿತು ಎಷ್ಟು ಬೇಕೋ ಅಷ್ಟು ಹೇಳಿ ಬೆಲ್ ಹೊಡೆದ ಕೂಡಲೇ ಹೆಡ್ ಮಾಸ್ಟರ್ ಕೊಠಡಿಗೆ ಬಂದಳು.

ಅಲ್ಲಿ ಪಟೇಲ ಕೂತಿದ್ದ! ಹೆಡ್‌ಮಾಸ್ಟರು `ಏನಮ್ಮ, ಚೀಟಿ ಕಳ್ಸಿದ್ರೂ ಬೆಲ್ ಹೊಡೆಯೋವರ್ಗೂ ಬರ್ಲಿಲ್ಲ? ಪಟೇಲ್ರು ನಿನಗಾಗಿ ಕಾಯ್ತಾ ಇದಾರೆ’ ಎಂದರು. ಹೌದೆಂಬಂತೆ ಪಟೇಲ ನೋಡಿದ. ಮಂಜುಳ `ತರಗತಿ ಬಿಟ್ಟು ಬರೋ ಅಂತ ಅನಿವಾರ್ಯ ನನಗೆ ಕಾಣ್ಣಿಲ್ಲ ಸಾರ್. ತಪ್ಪು ತಿಳ್ಕೊಬೇಡಿ’ ಎಂದಳು. `ಆಯ್ತು ಕೂತ್ಕೊ ಮಂಜುಳ’ ಎಂದು ಸೂಚಿಸಿದ ಹೆಡ್ ಮಾಸ್ಟರ್ ಪಟೇಲರ ಕಡೆ ನೋಡಿ, ಆನಂತರ ಮಂಜುಳಾ ಕಡೆ ನೋಡಿ `ಇವರೇನೋ ಕೇಳ್ಬೇಕಂತೆ’ ಎಂದು ವಿಷಯಕ್ಕೆ ಬಂದರು.

`ಕೇಳೋದೇನೂ ಇಲ್ಲ ಹೇಳೋದೈತೆ ಅಷ್ಟೆ’ ಎನ್ನುತ್ತ ಪಟೇಲ ಪೀಠಿಕೆ ಹಾಕಿದ.

ಮಂಜುಳ ಮಾತನಾಡಲಿಲ್ಲ, ಸುಮ್ಮನೆ ನೋಡಿದಳು. ಪಟೇಲ ಮಾತು ಮುಂದುವರೆಸಿದ. `ನೋಡಮ್ಮ ನೀನು ನಮ್ಮೂರಿನ್ ಜನಕ್ಕೆಲ್ಲ ಏನೇನೊ ಹೇಳ್ತಾ ಇದ್ದೀಯಂತೆ! ಅದೇನೊ ಆ ಕುಮಾರ ಅವ್ನೆ, ನಿನ್ ಸೆರಗಿಡ್ಕಂಡ್ ಓಡಾಡಿದ್ರೆ ಅನ್ನಿಗೇನಾರ ಹೇಳ್ಕ. ಆದ್ರೆ ಜನ್ರಿಗೆಲ್ಲ ಕಿವಿ ಊದೋಕ್ ಸುರುಮಾಡಿದ್ರೆ ನೆಟ್ಟಗಿರಾಕಿಲ್ಲ ಈಗ್ಲೆ ತಿಳ್ಕ, ಬತ್ತೀನಿ’ ಎಂದು ಜೋರು ಮಾಡಿ ಉತ್ತರಕ್ಕೂ ಕಾಯದೆ ಎದ್ದುನಿಂತ. ಹೆಡ್ ಮಾಸ್ಟರ್ ಕಡೆ ತಿರುಗಿ `ಇಂಥೋರ ಒಸಿ ಹದ್ದುಬಸ್ತ್ನಾಗಿಟ್ಕಾಬೇಕು ಸ್ವಾಮಿ’ ಎಂದು ಸೂಚಿಸಿದ. `ನಾನು ಮತ್ತೆ ಮತ್ತೆ ಹೇಳಾಕಿಲ್ಲ ಕಣವ್ವ ಮೇಡಮ್ಮ. ಇದೇ ಮದ್ಲು ಇದೇ ಕಡೆ.’ ಎಂದು ಎಚ್ಚರಿಸಿ ಹೋದ.

ಅನಿರೀಕ್ಷಿತವಾಗಿ ಘಟಿಸಿದ ಈ ಸಂದರ್ಭದಿಂದ ಮಂಜುಳ ಸ್ವಲ್ಪ ವಿಚಲಿತಳಾದಳು. ಆದರೆ ಮೂರ್ನಾಲ್ಕು ನಿಮಿಷಗಳಲ್ಲೇ ಚೇತರಿಸಿಕೊಂಡು ಕುರ್ಚಿಯಿಂದ ಮೇಲೆದ್ದಳು. ಹೆಡ್ ಮಾಸ್ಟರ್ `ಎಲ್ಲಾ ಕೇಳಿಸ್ಕೊಂಡಿದ್ದೀಯಲ್ಲ. ನಾನು ಮತ್ತೆ ಏನೂ ಹೇಳೋದಿಲ್ಲ. ನಿನ್ನ ಹುಷಾರು ನಿನ್ನದು’ ಎಂದರು. ಮಂಜುಳ ಮಾತಾಡಲಿಲ್ಲ. ಮತ್ತೆ ತರಗತಿಗೆ ಹೋದಳು.

ತರಗತಿ ಮುಗಿಸಿದ ಮೇಲೆ ಮನೆಗೆ ಹೋಗಬೇಕೆನಿಸಲಿಲ್ಲ. ಸೀದಾ ಸ್ವಪ್ನಮಂಟಪದ ಬಳಿಗೆ ಬಂದಳು. ಅಲ್ಲಿ ನೋಡಿದರೆ `ಹುಚ್ಚಿ’ ಕೂತಿದ್ದಳು. ಒಂದು ಕ್ಷಣ ದೂರದಲ್ಲೇ ನಿಂತ ಮಂಜುಳ ವಾಪಸ್ ಹೋಗಲೇ ಎಂದು ಯೋಚಿಸಿದಳು. ಈಕೆ ಬಂದದ್ದನ್ನು ಗಮನಿಸಿದ `ಹುಚ್ಚಿ’ ಕೂಗಿ ಕರೆದಳು.

`ಯಾಕಂಗೇ ನಿಂತ್ಕಂಡೆ? ನಾನು…. ರಾಜಕುಮಾರಿ ಕರೀತಾ ಇದ್ದೀನಿ. ಬಾ.’

ಮಂಜುಳಾ ನಿಂತೇ ಇದ್ದಳು.

`ನೀನೇನ್ ಬತ್ತೀಯೊ ಇಲ್ಲ ನನ್ನ ಸೈನ್ಯ ಕಳಿಸಿ ಕರುಸ್ಬೇಕೊ’ ಎಂದು ಆಕೆ ಎಚ್ಚರಿಕೆ ಕೊಟ್ಟಳು.

`ನಿನ್ನ ಸೈನ್ಯ ಕರ್ಸೊ ತೊಂದ್ರೆ ತಗೋಬೇಡ, ನಾನೇ ಬರ್ತೇನೆ’ ಎಂದು ಮಂಜುಳ ಹೇಳಿ ಮಂಟಪದ ಕಡೆಗೆ ಬರತೊಡಗಿದಳು.

`ರಾಜಕುಮಾರಿ ಅಂದ್ರೆ ಯಾರ್ಗೂ ಲೆಕ್ಕಾನೇ ಇಲ್ಲ. ಸೈನ್ಯ ಕರುಸ್ತೀನಿ ಅಂದ್ರೆ ಎದೆ ಒಡ್ದು ಎದ್ನೊ ಬಿದ್ನೊ ಅಂಬ್ತ ಬರ್ತಾರೆ’ ಎಂದು `ಹುಚ್ಚಿ’ ಗೊಣಗಿಕೊಂಡಳು. ಮಂಜುಳ ಸಮೀಪಕ್ಕೆ ಬಂದಾಗ ಕೇಳಿದಳು.

`ಎಲ್ಲಿ ನಿನ್ನ ಗೆಣೆಕಾರ’

ಮಂಜುಳ ಮಾತಾಡದೆ ಬಿಗಿಮುಖದಿಂದ ದಿಟ್ಟಿಸಿದಳು.

ಬ್ಯಾಸ್ರ ಮಾಡ್ಕಾಬೇಡ, ಅವ್ನನ್ನ ನನ್ನ ಜತ್ಯಾಗಿದ್ದು ರಾಜಕುಮಾರ ಆಗು ಅಂದ್ರೆ, ನಿನ್ನ ಜತೆಯಾಗಿದ್ದು ಗೆಣೆಕಾರ ಆಗ್ತಿನಿ ಅಂಬ್ತಾನೆ. ಅವ್ನೀಗೆ ಅದೃಷ್ಟ ಹಣೇಲ್ ಬರ್ದಿಲ್ಲ. ಏನ್ ಮಾಡಾಕಾತ್ತೈತೆ ಬಿಡು’ ಎಂದು ಆಕೆ ಹೇಳಿ ಹತ್ತಿರಕ್ಕೆ ಬಂದಳು.

`ನನ್ ಮ್ಯಾಲ್ ಬ್ಯಾಸ್ರ ಇಲ್ಲ ತಾನೆ’ ಎಂದು ಮತ್ತೆ ಕೇಳಿದಳು.

`ಖಂಡಿತ ಇಲ್ಲ. ನಿನ್ನ ಕಂಡ್ರೆ ಅದ್ಯಾಕೊ ನಂಗೆ ತುಂಬಾ ಇಷ್ಟ’ ಮಂಜುಳ ಉತ್ತರಿಸಿದಳು.

`ನಿಂಗೆ ನಾನು ರಾಜಕುಮಾರಿ ಅಂದ್ರೆ ಗೊತ್ತಾಗೈತೆ ಅದ್ಕೇ ಇಷ್ಟಪಡ್ತೀಯ!’

`ಇಲ್ಲ. ನಂಗೆ ನೀನು ರಾಜಕುಮಾರಿ ಅಂತ ಗೊತ್ತಾಗಿಲ್ಲ. ನಾನು ಹಾಗಂತ ತಿಳ್ಕೊಂಡೂ ಇಲ್ಲ.’

`ಯಾಕೆ ಆ ನಿನ್ನ ಗೆಣೆಕಾರ ನನ್ನ ಕತೆ ಹೇಳ್ಳಿಲ್ವ’

`ನಾನೇ ಕೇಳ್ಲಿಲ್ಲ.’

`ಅವ್ನಮ್ಮ – ಮಹಾಕಾಳಿ ಕರಿಯಮ್ಮ – ಅವ್ಳನ್ನ ಕೇಳ್ಬೇಕಿತ್ತು.’

`ಕೇಳ್ದೆ. ಆದ್ರೆ ಆಕೆ ಹೇಳ್ಲಿಲ್ಲ.’

`ಸತ್ಯ ಹೇಳಾಕೆ ಎಂಟೆದೆ ಬೇಕು.’ – ಆಕೆ ದಿಟ್ಟವಾಗಿ ಹೇಳಿದಳು.

`ಹಾಗಾದ್ರೆ ನೀನೇ ಹೇಳು.’

`ನಾನು ನಾನು…. ನಾನ್ ರಾಜಕುಮಾರಿ! ಉಳ್ದಿದ್ದೆಲ್ಲ ಊರ್ನೋರ ಕೇಳು.’

`ಹೆಣ್ಣಿನ ವಿಷಯ ಕೇಳಿದ್ರೆ. ಒಬ್ಬೊಬ್ರು ಒಂದೊಂದು ಕತೆ ಹೇಳ್ತಾರೆ.’

`ಯಾವ ವಿಷ್ಯ ಕೇಳಿದ್ರೂ ಅಷ್ಟೆ. ಅಂದಂಗೆ ಮರ್ತಿದ್ದೆ. ನಿನ್ನ ಗೆಣೆಕಾರನ ತಂಗಿ ಹೆಂಗವ್ಳೆ. ಹುಷಾರಾಗವ್ಳ ಹೆಂಗೆ’

`ಈಗ ಪರವಾಗಿಲ್ಲ, ಏನೂ ಅಪಾಯ ಇಲ್ಲ.’

`ಈಗ ಅಪಾಯ ಇರೋದು ಅವ್ಳಿಗಲ್ಲ. ನಂಗೆ’

`ನಿಂಗೆ ಏನ್ ಅಪಾಯ ಇದೆ ಹೇಳು. ನಾನು ನಿನ್ನ ಪರವಾಗಿ ನಿಂತ್ಕತೀನಿ’ ಎಂದು ಮಂಜುಳ ಕುತೂಹಲಾಸಕ್ತಿ ಮತ್ತು ಕಳಕಳಿಯಿಂದ ಕೇಳಿದಳು.

ಆಕೆ ದುಃಖಿತಳಾದಳು. ಮಂಟಪದ ಕಂಬಗಳನ್ನು ಕೈಯಿಂದ ಮೃದುವಾಗಿ ಸವರಿದಳು.

`ಹೇಳು, ನಿಂಗೇನ್ ಅಪಾಯ ಇದೆ ಹೇಳು. ನಾನಿದ್ದೀನಿ.’

`ನಂಗೆ ಅಪಾಯ ಅಂದ್ರೆ – ನನ್ನ ಮಂಟಪಕ್ಕೆ ಅಪಾಯ. ಈ ಮಂಟಪ ಉಳೀಬೇಕು. ನಾನಿಲ್ಲಿದ್ಕಂಡು ಕನಸು ಕಾಣ್ತಾನೇ ಇರ್ಬೇಕು’ – ಆಕೆ ಸ್ಪಷ್ಟಪಡಿಸಿದಳು.

`ನಾನೂ ಅದನ್ನೇ ಹೇಳ್ತಿದ್ದೀನಿ.’

`ನೀನ್ ಹೇಳಿದ್ರೇನ್ ಬಂತು ನಿನ್ನ ಗೆಣೆಕಾರ ಹೇಳ್ಬೇಕಲ್ಲ? ಅವ್ನು ಅಮ್ಮನ್ ಮಗ.’

`ನಂಗೇನ್ ಹಾಗ್ ಅನ್ಸೋದಿಲ್ಲ.’

`ಕೆಲವರಿಗೆ ಏನೂ ಅನ್ಸೋದಿಲ್ಲ!’

ಮಂಜುಳ ಬೇಸರದಿಂದ ನೋಡಿದಳು.

`ಬ್ಯಾಸ್ರ ಮಾಡ್ಕಬ್ಯಾಡ. ನಾನು ಇದ್ದದ್ದು ಇದ್ದಂಗೆ ಹೇಳ್ತೀನಿ.’

`ಹಾಗಾದ್ರೆ ನೀನು ಯಾಕ್ ಹುಚ್ಚಿಯಂಗಿದ್ದೀಯ ಹೇಳು.’ ಮಂಜುಳ ಮತ್ತೆ ಕೇಳಿದಳು.

`ಹುಚ್ಚಿ ಕೇಳಿದ್ರೆ ಹುಚ್ಚು ಯಾಕ್ ಹಿಡೀತು ಅಂಬ್ತ ಹೇಳ್ತಾಳ? ನಿನಗೆಲ್ಲೊ ಹುಚ್ಚು’ ಆಕೆ ದೃಢವಾಗಿ ಹೇಳಿದಳು. ಮನಸಾರೆ ನಕ್ಕಳು.

ಮಂಜುಳಾಗೆ ನಿಜ ಎನ್ನಿಸಿತು. ಆಕೆ ನಗು ನಿಲ್ಲಿಸಿ ಹೇಳಿದಳು.

`ನೋಡು, ನಾನು, ರಾಜಕುಮಾರಿ ಹೇಳ್ತಾ ಇದ್ದೀನಿ. ಈ ಮಂಟಪದ ಮಯ್ರಾದೆ ಕಾಪಾಡ್ಬೇಕು. ಪ್ರಾಣ ಕೊಟ್ಟಾದ್ರೂ ಇದನ್ನ ಉಳುಸ್ಬೇಕು.’

`ನೀನೇನೊ ಹೀಗೆ ಹೇಳ್ತೀಯ. ಅಲ್ಲಿ ಪಟೇಲ ಬಂದು ನನಗೆ ಬೆದರಿಕೆ ಹಾಕಿದ್ದಾನೆ.’ ಮಂಜುಳ ನಡೆದ ವಿಷಯವನ್ನು ಹೇಳಿದಳು.

`ಆ ಪಟೇಲನ ಪೊಗರು ಜಾಸ್ತಿ ಆಗೈತೆ. ಇವತ್ತು ಇಲ್ಲಿಗೆ ಬಂದಿದ್ದ. ಯಾರ್ ಯಾರ್ನೊ ಕರ್ಕಂಡ್ ಬಂದಿದ್ದ. ಸುತ್ತಮುತ್ತ ಜಮೀನೆಲ್ಲ ಅಳತೆ ಮಾಡ್ಕಂಡ್ ಹೋದ್ರು. ಮಂಟಪಾನೂ ಅಳ್ಕಂಡು ಏನೇನೊ ಮಾತಾಡ್ಕಂಡೋದ್ರು. ನಂಗನ್ನುಸ್ತೈತೆ ಈಗಾಗ್ಲೆ ಎಲ್ಲಾ ಮುಗ್ದೋಗೈತೆ!’

ಆಕೆಯ ಕಣ್ಣಂಚಿನಲ್ಲಿ ಮತ್ತೆ ಕಣ್ಣೀರು ಕಾಣಿಸಿತು. ಒತ್ತಿಬರುವ ದುಃಖವನ್ನು ತಡೆದುಕೊಳ್ಳುತ್ತ ಮತ್ತೆ ಹೇಳಿದಳು.

`ನಂಗೆ ಈ ಮಂಟಪ ಬೇಕು. ನಾನಿಲ್ಲಿ ನಿಂತ್ಕಂಡು ರಾಜಕುಮಾರ ಬರ್ತಾನೆ ಅಂಬ್ತ ಕಾಯ್ತಾ ಇರ್ಬೇಕು.’ ಮಂಜುಳ ಆಕೆಯ ಬಳಿ ಬಂದಳು. ಕಣ್ಣೀರು ಒರೆಸಿ ಹೇಳಿದಳು.

`ಅಳಬೇಡ, ಜನ ಮನಸ್ ಮಾಡಿದ್ರೆ ಯಾವದೂ ಅಸಾಧ್ಯ ಅಲ್ಲ.’

`ಮನಸಿದ್ದೋರು ಮನಸ್ ಮಾಡ್ತಾರೆ. ಈ ಊರಾಗೆ ಎಲ್ಲೈತೆ ಮನಸ್ಸು’ ಆಕೆ ಪ್ರಶ್ನಿಸಿದಳು.

`ಜನರಿಗೆ ಮನಸ್ಸು ಇದ್ದೇ ಇರುತ್ತೆ. ಅದನ್ನ ಅವರು ಹುಡುಕಿ ಕೊಳ್ಳೋ ಹಾಗೆ ನಾವ್ ಮಾಡಬೇಕು ಅಷ್ಟೆ. ಇಷ್ಟಕ್ಕೂ ಆಳೋರೇ ಅಂತಿಮ ಅಲ್ಲವಲ್ಲ. ನೀನೇನೂ ಯೋಚಿಸ್ಬೇಡ.’ ಎಂದು ಮಂಜುಳ ಸಮಾಧಾನಿಸಿ ಹೊರಟಳು.

ಆಕೆ ಮಂಟಪದಲ್ಲೇ ನಿಂತು ನೋಡುತ್ತಿದ್ದಳು.

ಮಂಜುಳ ಸ್ವಲ್ಪ ದೂರ ಹೋಗಿ ಮತ್ತೆ ತಿರುಗಿ ಮಾತಾಡಿದಳು.

`ರಾತ್ರಿ ಹೊತ್ತು ಎಲ್ಲಿರ್ತೀಯ ನಮ್ಮನೆ ಹತ್ರಾನೆ ಬಾ. ಅಲ್ಲೇ ಊಟ ಮಾಡಿ ಮಲಗೀವಂತೆ.’

`ಬ್ಯಾಡ, ನಂಗೆ ಊರಿನ ಸವಾಸನೇ ಬ್ಯಾಡ, ಯಾರೂ ಕರೀದೆ ಇದ್ದಾಗ ನೀನೊಬ್ಳೆ ಒಬ್ಬಳು ಕರ್ದಿದ್ದೀಯ. ಆದ್ರೂ ನಂಗೆ ಈ ಮಂಟಪ ಬಿಟ್ಟಿರೋಕಾಗಲ್ಲ. ಇಲ್ಲೇ ಮಲಿಕಂತೀನಿ.’

`ಹೀಗೆಲ್ಲ ಹಟ ಮಾಡ್ ಬಾರದು ನೀನು. ನಾನ್ ಬೇರೆ ಅಲ್ಲ ನೀನ್ ಬೇರೆ ಅಲ್ಲ. ಊಟಕ್ಕಾದ್ರು ಬಾ.’ – ಮಂಜುಳ ಒತ್ತಾಯಿಸಿದಳು.

`ನಿಂಗೊತ್ತಿಲ್ವ ನಾನು ರಾಜಕುಮಾರಿ! ನಂಗೆ ಹಸಿವೇ ಆಗಲ್ಲ.’ ಎಂದು ಆಕೆ ನಗತೊಡಗಿದಳು.

ಮಂಜುಳಾಗೆ ವ್ಯಥೆಯಾಯಿತು. ವ್ಯಥೆಯನ್ನು ಹೊತ್ತು ಅಲ್ಲಿಂದ ಹೊರಟಳು. ಮಂಟಪದ ಮೇಲೆ ಮುಳುಗುತ್ತಿದ್ದ ಸೂರ್ಯನ ಛಾಯೆ ಆವರಿಸುತ್ತಿದ್ದಾಗ `ಹುಚ್ಚಿ’ಯೆನಿಸಿಕೊಂಡ ಆಕೆ ಅಲ್ಲೇ ನಿಂತಿದ್ದಳು.

ಮಂಜುಳ ರಭಸವಾಗಿ ಹೆಜ್ಜೆ ಹಾಕುತ್ತ, ಊರಕಡೆಗೆ ಬರುತ್ತಿದ್ದಾಗ `ಮೇಡಮೋರೆ’ ಎಂದು ಯಾರೋ ಕೂಗಿದ್ದು ಕೇಳಿಸಿ ಬೆಚ್ಚಿದಳು. ನಿಂತು ನೋಡಿದಾಗ ಪುಟ್ಟಕ್ಕಯ್ಯ ಸೌದೆ ಹೊತ್ತುಕೊಂಡು ಬರುತ್ತಿದ್ದಳು. ಪಕ್ಕದ ಮರಗಳ ಗುಂಪಿನಿಂದ ಈಚೆ ಬರುತ್ತ `ಈಟೊತ್ನಾಗೆ ಹಿಂಗೆಲ್ಲ ಬರ್ ಬ್ಯಾಡಿ ಕಣಮ್ಮ. ಎಷ್ಟಾದ್ರು ನೀವು ಓದಿರೋ ಹೆಣ್ಮಗಳು’ ಎಂದು ಮಾತಿಗಾರಂಭಿಸಿದಳು.

`ಯಾಕೆ, ಹಳ್ಳಿ ಹೆಣ್ಮಕ್ಕಳು ಬರಬಹುದಾ’ ಎಂದು ಮಂಜುಳ ಕೆಣಕಿದಳು.

`ಹಂಗಲ್ರಮ್ಮ, ನಮ್ಗೆಲ್ಲ ಇಲ್ಲಿ ಓಡಾಡಿ ಅಭ್ಯಾಸ ಆಗೈತೆ. ನಿಮ್ಗಾದ್ರೆ ಎಲ್ಲ ಹೊಸ್ದು, ಜತ್ಗೆ ರಂಗುರಂಗಾಗಿ ಕಾಣ್ತೀರಲ್ವ, ಒಂದೋಗಿ ಒಂದಾಗ್ ಬಿಟ್ರೆ ಅಂಬ್ತ ಹೇಳ್ದೆ ಅಷ್ಟೆ.’ ಎಂದು ಪುಟ್ಟಕ್ಕಯ್ಯ ಸಮಾಧಾನ ಹೇಳಿದಳು. ಜೊತೆಗೆ `ನೀವ್ಯಾಕೊ ಆ ಸ್ವಪ್ನ ಮಂಟಪದ್‌ತಾವ ಜಾಸ್ತಿ ಹೋಗಂ ಕಾಣುಸ್ತೈತೆ, ಅಲ್ವಾ’ ಎಂದು ಕೇಳಿದಳು.

`ಯಾಕೆ? ಹೋಗ್ಬಾರ್ದ?’

`ನಾನ್ ಯಾರು ಹೋಗ್ ಬ್ಯಾಡ್ರಿ ಅಂಬಾಕೆ ಸುಮ್ಕೆ ಹಂಗಂದೆ. ಅಷ್ಟೆ. ಯಾಕೇಂದ್ರೆ ನೀವೂ ಆ ಹುಚ್ಚಿಥರಾ ಆಗ್ಬಿಟ್ರೆ ಅಂಬ್ತ ಭಯ!’

`ಪುಟ್ಟಕ್ಕಯ್ಯ, ನಿಂಗೆ ಆ ಹುಚ್ಚಿ ವಿಷ್ಯ ಎಲ್ಲಾ ಗೊತ್ತಾ’ – ಮಂಜುಳ ಕೇಳಿದಳು.

`ಮತ್ತೆ ಗೊತ್ತಿರಾಕಿಲ್ವ’ – ತನಗಲ್ಲದೆ ಮತ್ತಾರಿಗೆ ಗೊತ್ತಿರಬೇಕು ಎಂಬಂತೆ ಆಕೆ ಉತ್ತರವನ್ನೇ ಪ್ರಶ್ನೆ ಮಾಡಿದಳು.

`ಆಕೆ ಹೆಸರೇನು ಪುಟ್ಟಕ್ಕಯ್ಯ’

`ಅದೇ, ರಾಜಕುಮಾರಿ!’ – ಪುಟ್ಟಕ್ಕಯ್ಯ ಉತ್ತರಿಸಿದಳು.

`ನಾನ್ ಕೇಳ್ತಾ ಇರೋದು ರಾಜಕುಮಾರಿ ಅಂತ ಹೇಳ್ಕೊತಾಳಲ್ಲ ಆಕೆ ಹೆಸರು’ – ಮಂಜುಳ ಬಿಡಿಸಿ ಹೇಳಿದಳು.

`ನಾನ್ ಹೇಳ್ತಾ ಇರೋದೂ ಅದುನ್ನೇ. ಅವಳ ಹೆಸ್ರೇ ರಾಜಕುಮಾರಿ ಅಂಬ್ತ.’

`ಹಾಗಾದ್ರೆ ರಾಜಕುಮಾರಿ ಹುಚ್ಚೀ ಆಗಿದ್ದು ಹೇಗೆ’

`ನನ್ನೇನ್ರಮ್ಮ ಕೇಳ್ತೀರ? ಆ ಶಿವಕುಮಾರ ನಿಮಗೇಳೇ ಇಲ್ವ?’

`ನಿಜವಾಗೂ ಇಲ್ಲ ಪುಟ್ಟಕ್ಕಯ್ಯ.’

`ಯಾವಾಗ್ಲು ಹಿಂಗೇ ನೋಡಿ ಮತ್ತೆ, ಕಂಡೋರ್ ಕತೆನಾದ್ರೆ ಚಂದಾಗ್ ಹೇಳ್ತಾರೆ!’

ಮಂಜುಳಾಗೆ ಕುತೂಹಲ ಕೆರಳಿತು.

`ಅಂದ್ರೆ ನಂಗರ್ಥ ಆಗ್ಲಿಲ್ಲ.’ ಎಂದಳು.

`ಅದೇ ಒಳ್ಳೇದು ಸುಮ್ಮಿರಿ. ನಾನ್ ಹೇಳಿ ಆಮ್ಯಾಕೆ ರಂಪಕ್ ಇಟ್ಕಂಡ್ರೆ ಯಾಕ್ ಸುಮ್ಕೆ ತರ್ಲೆ ತಾಪತ್ರಯ!’ – ಪುಟ್ಟಕ್ಕಯ್ಯ ಹಿಂಜರಿದಳು.

`ನೀನೇನು ಹೆದ್ರಬೇಡ ಪುಟ್ಟಕ್ಕಯ್ಯ, ನಾನು ಖಂಡಿತ ಯಾರ್ಗೂ ಹೇಳಲ್ಲ.’

ಮಂಜುಳ `ಹೆದರಬೇಡ’ ಎಂದದ್ದು ಪುಟ್ಟಕ್ಕಯ್ಯನಿಗೆ ಅವಮಾನವೆನ್ನಿಸಿತು. `ನಾನ್ಯಾಕ್ ಹೆದ್ರಿಕಂಬ್ಲಿ? ಊರಿಂದೂರ್ಗೆ ವಿಷ್ಯ ಗೊತ್ತೈತೆ. ಹೇಳ್ತೀನ್ ಕೇಳಿ.’ ಎಂದು ಶುರುಮಾಡಿದಳು.

ಆ `ಹುಚ್ಚಿ’ಯ ಹೆಸರು ರಾಜಕುಮಾರಿ, ಆಕೆಯ ತಂದೆ ನಾಟಕಗಳಿಗೆ ಬೇಕಾದ ಪರದೆ, ಕಿರೀಟ, ಸಿಂಹಾಸನ ಇತ್ಯಾದಿ ಸಾಮಗ್ರಿಗಳನ್ನು ಇಟ್ಟುಕೊಂಡು ಹಳ್ಳಿ ನಾಟಕಗಳಿಗೆ ಬಾಡಿಗೆ ಮೇಲೆ ಸರಬರಾಜು ಮಾಡುತ್ತಿದ್ದ ಕಣ್ಣಪ್ಪ. ಈತ ಸ್ವತಃ ಕಲಾವಿದನೂ ಆಗಿದ್ದ. ತಾನೇ ಮೇಕಪ್ ಮಾಡುತ್ತಿದ್ದ. ಸುತ್ತೇಳು ಹಳ್ಳಿಗಳಲ್ಲಿ ಪ್ರಸಿದ್ಧನಾಗಿದ್ದ. ತನ್ನ ಮಗಳಿಗೆ ರಾಜಕುಮಾರಿ ಎಂದು ಹೆಸರಿಟ್ಟು ಬೀಗುತ್ತಿದ್ದ. ಈಕೆ ಹುಟ್ಟಿದ ಕೆಲವೇ ತಿಂಗಳಲ್ಲಿ ತಾಯಿ ಸತ್ತದ್ದರಿಂದ ತಾನು ತುಂಬಾ ಮುತುವರ್ಜಿ ವಹಿಸಿ ಸಾಕಿದ್ದ. ಮುದ್ದಿನ ಮಗಳಾಗಿ ಬೆಳೆಸಿದ್ದ. ನಾಟಕದವನ ಮನೆಯ ಮಗಳಾದ್ದರಿಂದಲೋ ಏನೊ ಅನೇಕರು ಆಕೆಯೊಂದಿಗೆ ಸಲಿಗೆಯಿಂದ ವರ್ತಿಸತೊಡಗಿದರು. ಕೆನ್ನೆ ಹಿಂಡುವುದು, ಕಿವಿ ಹಿಂಡುವುದು, ಹೀಗೆ ಮನೆಗೆ ಬಂದ ಗಂಡಸರು ತಮಾಷೆ ಮಾಡುತ್ತಿದ್ದರು. ಮೊದಮೊದಲು ಸುಮ್ಮನಿದ್ದ ರಾಜಕುಮಾರಿ ಆನಂತರ ಅದನ್ನು ಅವಮಾನವೆಂದು ಭಾವಿಸಿದಳು. ಪ್ರತಿಭಟಿಸಿದಳು. ಕೆಲವರಂತೂ `ನಮ್ ಕೈಯ್ಯಿಗ್ ಸಿಗ್ದೆ ಎಲ್ಲಿಗೋಗ್ತಿಯ ಬಿಡ್ ಬಿಡು’ ಎಂದು ಉಚಾಯಿಸಿ ಮಾತನಾಡಿದ್ದರು.

ಅದು ಹೇಗೊ ಆಕೆಗೆ ಶಿವಕುಮಾರನ ಮೇಲೆ ಮನಸಾಯಿತು. ಆತ ಮತ್ತು ಆಕೆ ಬೆಟ್ಟದಲ್ಲಿ ಕೋಟೆ ಗೋಡೆಯ ಮರೆಯಲ್ಲಿ ಕೂತು ಮಾತಾಡುತ್ತಿದ್ದುದನ್ನು ಅನೇಕರು ಕಂಡಿದ್ದರು.

ಪುಟ್ಟಕ್ಕಯ್ಯ ಇಷ್ಟು ವಿವರಗಳನ್ನು ಕೊಡುವಷ್ಟರಲ್ಲಿ ಮಂಜುಳ ಮಧ್ಯದಲ್ಲೇ ಕೇಳಿದಳು.

`ಹಾಗಾದ್ರೆ ಇವ್ರ್ ಇಬ್ರು ಯಾಕ್ ಮದ್ವೆ ಆಗ್ಲಿಲ್ಲ?’

`ಅಲ್ಲೇ ಕಣಮ್ಮ ಇರಾದು ಸಾರಸ್ಯ! ಇವ್ರಿಬ್ರು ಅಂದ್ರೆ ರಾಜಕುಮಾರಿ, ಶಿವಕುಮಾರ ಜತೆಯಾಗವ್ರೆ ಅಂಬ್ತ ಗೊತ್ತಾಗಿದ್ದೇ ತಡ ಕರಿಯಮ್ಮ ಕೆಂಡಮಂಡಲ ಆದ್ಲು. ಶಿವಕುಮಾರನ್ನ ಕರ್ದು ಚಂದಾಗ್ ನೀರಿಳ್ಸಿದ್ಲು. ಇನ್ನೊಂದ್ ದಪ ಏನಾರ ರಾಜಕುಮಾರಿ ಜತ್ಯಾಗ್ ನೋಡಿದ್ರೆ ಗ್ರಾಚಾರ ನೆಟ್ಟಗಿರಾಕಿಲ್ಲ ಅಂಬ್ತ ಹದ್ದುಬಸ್ತು ಮಾಡಿದ್ಲು. ಅವತ್ನಿಂದ ಶಿವಕುಮಾರ ಸುಮ್ನಾಗ್ಬಿಟ್ಟ. ಅದ್ಕೇ ಒಂದ್ ಮಾತ್ ಹೇಳ್ತಾ ಇವ್ನಿ, ನೀನೂ ಒಸಿ ಎಚ್ಚರವಾಗಿರಮ್ಮ.’

ಮಂಜುಳ ಒಂದು ಕ್ಷಣ ತಬ್ಬಿಬ್ಬಾದಳು. ಆದರೆ ವಿಷಯವನ್ನು ಪೂರ್ಣ ತಿಳಿದುಕೊಳ್ಳುವ ಆಸಕ್ತಿ ಅವಳಲ್ಲಿತ್ತು. ಆದ್ದರಿಂದ ತನ್ನ ವಿಷಯದ ವಿವರಕ್ಕೆ ಬರಲು ಇಷ್ಟಪಡದೆ ರಾಜಕುಮಾರಿಯ ವಿಷಯದ ಬಗ್ಗೆಯೇ ಕೇಳಿದಳು.

`ನಾನು ಎಚ್ಚರವಾಗಿದ್ದೇಕಾದಂಥ ಪರಿಸ್ಥಿತಿ ಏನ್ ಬಂದಿಲ್ಲ. ಪುಟ್ಟಕ್ಕಯ್ಯ, ಆದ್ರ್ ವಿಷ್ಯ ಬೇಡ. ಆ ರಾಜಕುಮಾರಿ ವಿಷಯ ಹೇಳು.’

`ರಾಜಕುಮಾರಿ ಸುಮ್ಮನಾಗ್ಲಿಲ್ಲ. ಹೇಗಾದ್ರು ಶಿವಕುಮಾರನ್ನ ನೋಡ್ಬೇಕು ಅಂಬ್ತ ಎಷ್ಟೇ ಹಂಬ್ಲಿಸಿದ್ರೂ ಆಗ್ಲಿಲ್ಲ. ಶಿವಕುಮಾರನಿಗೂ ಆಸೆ ಇತ್ತು. ದಮ್ಮಿದ್ದಿಲ್ಲ. ಅವನ್ನ ಊರಿಗೆ ಬರಬ್ಯಾಡ ಅಂಬ್ತ ಪಟ್ಟಣಕ್ಕೆ ಕಳ್ಸಿದ್ರು.’

`ಸಿದ್ದಣ್ಣ ಏನಂದ್ರು’

`ಸಿದ್ದಣ್ಣಂಗೆ ಏನೊ ಇಬ್ರು ಇಷ್ಟಪಟ್ಟವ್ರೆ ಮದ್ವೆ ಆಗಾದಾದ್ರೆ ಆಗ್ಲಿ ಅಂಬ್ತಾನೇ ಆಸೆ ಇತ್ತಂತೆ. ಇಬ್ರೂ ಒಂದೇ ಜಾತಿನೋರು, ಯಾವುದು ಅಡ್ಡಿಗಿಡ್ಡಿ ಇಲ್ಲ ಅಂಬ್ತ ಹೇಳಿದ್ನಂತೆ, ಆದ್ರೆ ಕರಿಯಮ್ಮ ಬಿಡಾದುಂಟಾ? ಸಿದ್ದಣ್ಣನ್ ಬಾಯ್ ಮುಚ್ಚಿಸಿದ್ಲು. ಕಣ್ಣಪ್ಪನ್‌ತಾವ ಹೋಗಿ ಹಿಗ್ಗಾಮುಗ್ಗ ಬಯ್ದು ಬೀದೀನಾಗೆ ಅವ್ಮಾನ ಮಾಡಿದ್ಲು. ರಾಜಕುಮಾರೀನ ಕ್ಯಾಕರ್ಸಿ ಉಗುಳಿದ್ಲು. ಇದೇ ಚಿಂತೆನಾಗೆ ರಾಜಕುಮಾರಿ ಒಬ್ಬಂಟಿ ಆದ್ಲು. ಸಪ್ನ ಮಂಟಪ ಅಯ್ತಲ್ಲ, ಅಲ್ಲೋಗಾದು, ನಿಂತ್ಕಮಾದು, ನಗಾದು ಮಾಡ್ತಾ ಇದ್ಲು, ಊರೋರೆಲ್ಲ ಹುಚ್ಚೀ ಹುಚ್ಚೀ ಅಂದ್ರು. ಅವಳು ಹುಚ್ಚೀನೇ ಆಗ್ಬಿಟ್ಟವ್ಳೆ. ಇನ್ನೇನಮ್ಮ ಹೇಳಾದು ಅವ್ಳ ವಿಷ್ಯಾನ! ಅವ್ಳ ಚಿಂತೇನಾಗೆ ಕಣ್ಣಪ್ಪ ಕಾಯಿಲೆ ಬಿದ್ದು ಸತ್ತೇಹೋದ! ಅವ್ಳು ಮಾತ್ರ ಸಾಯ್ಲೂ ಇಲ್ಲ ಬದುಕ್ಲೂ ಇಲ್ಲ.’

ಮಂಜುಳ ಮಾತಾಡಲಿಲ್ಲ. ಊರು ಸಮೀಪವಾಗುತ್ತಿದ್ದಂತೆ ಕತ್ತಲು, ಬೆಳಕಿನ ಕಣ್ಣು ಕೀಳತೊಡಗಿತ್ತು. ಸ್ವಪ್ನ ಮಂಟಪದಲ್ಲಿ ರಾಜಕುಮಾರಿಯ ನಗು ಬತ್ತಿ ಹೋಗಿ, ಹೊರಹೊಮ್ಮದ ಕಂಬನಿಯ ಕಡಲು ಕುದಿಯುತ್ತಿತ್ತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೆ ?

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…