ಮಧುಮಾಸದೊಂದು ಹಗಲಿಗೆ ನಿನ್ನ ಹೋಲಿಸಲೆ ?
ನಿನ್ನ ಸೌಮ್ಯತೆ ಚೆಲುವು ಅದಕಿಂತಲೂ ಹಿರಿದು.
ನಡುಗುವುವು ಸವಿಮೊಗ್ಗುಗಳು ಒಡ್ಡುಗಾಳಿಗೆ,
ಬೇಸಿಗೆಯ ಗೇಣಿ ಬಲು ಬೇಗನೇ ಮುಗಿಯುವುದು;
ಆಗಸದ ಕಣ್ಣು ಕೆಲವೊಮ್ಮೆ ಧಗೆ ಕಾರುವುದು,
ಎಷ್ಟೊ ಸಲ ಅದರ ಹೊಂಬಣ್ಣ ಮಂಕಾಗುವುದು;
ಆಕಸ್ಮಿಕಕ್ಕೊ ಪ್ರಕೃತಿಯ ಒರಟು ಹೊರಳಿಗೋ
ಸಿಕ್ಕು ಒಂದೊಂದೆ ಸೌಂದರ್ಯದೆಳೆ ಕಳಚುವುದು;
ನಿನ್ನ ಅಮೃತವಸಂತ ಕಾಂತಿ ಉಳಿವುದು ನಿತ್ಯ
ಕಾಯ್ದುಕೊಳ್ಳುವುದು ತನ್ನನ್ನು, ಕಾವ್ಯದನಂತ
ರೇಖೆಯಲಿ ಬೆಳೆದಿರಲು ನೀನು, ಸಾವಿಗಸಾಧ್ಯ
ತನ್ನ ನೆರಳಿಗೆ ನಿನ್ನನೆಳೆವೆನೆನ್ನುವ ಪಂಥ.
ಲೋಕ ಬಾಳುವವರೆಗು ಕಣ್ಣು ಕಾಣುವವರೆಗು
ಉಳಿದು ಇದು ನೀಡುವುದು ಅಮರತ್ವವನು ನಿನಗೂ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 18
Shall I compare thee to a summer’s day?
















