ಕಾರಿ ಕಕ್ಕಿ ಬಾರಿ ಕವಳಿ
ಪರಗಿ ಹಣ್ಗಳ ತಿನ್ನುವಾ
ಡಬ್ಬಗಳ್ಳಿಯ ಕೆಂಪು ಹಣ್ಣನು
ತಿಂದು ಹಕ್ಕಿಯ ಕರೆಯುವಾ
ತೊಂಡಿ ತುಪ್ಪರಿ ಮೆಕ್ಕಿ ಕುಂಬಳ
ಪುಂಡಿ ಪಡುವಲ ನೋಡುವಾ
ಸವುತಿ ಹಾಗಲ ಹೀರಿ ಅವರಿಯ
ತುಂಬು ಗಲ್ಲವ ಸವಿಯುವಾ
ಇರುಳ ಗೂಗಿಯ ಗಾನ ಕೇಳುತ
ಚಂದ್ರ ಚಿತ್ರವ ಬರೆಯುವಾ
ಕಾರ ಮುಗಿಲಿನ ಕರಿಯ ಸೂರ್ಯನ
ಕರಿಯ ಕಂಬಳಿ ನೇಯುವಾ
ಹುಂಚಿ ಚಿಗುರಿನ ಹುಳಿಯ ನೀರನು
ಡೊಣ್ಣಿ ಕಾಟಾ ಕುಡಿಯಲಿ
ಬೇವು ಬಳುವಲ ಆಲ ಅರಳೆಯ
ಮೇಲೆ ಸುರಿಮಳೆ ಸುರಿಯಲಿ
ಮಣ್ಣು ಸುಂದರ ಕಲ್ಲು ಸುಂದರ
ಭೂಮಿ ಚೆಲುವಿನ ಹಂದರ
ಗಾಳಿ ಸುಂದರ ಧೂಳಿ ಸುಂದರ
ಭುವನ ದೇವನ ಮಂದಿರ
*****