ಎಂದು ಬರುವುದೋ ನಿನ್ನ ಕರುಣೆ ಮಳೆಯಾಗಿ ಧರೆಗೆ ಇಳಿದು
ಎಂದಿನಂತೆ ಸುರಿದಿಹುದು ಬಿಸಿಲು ಎದೆಯ ಒಣಗಿಸಿಹುದು || ೧ ||
ಮಳೆಯು ಬಂದರೂ ಒಂದು ಹನಿ ನಿಲ್ಲದೇ ಹರಿಯುತ್ತಿತ್ತು
ಇಳಿಯಲೊಲ್ಲದೋ ಕಾವು, ಸುಡುತಲಿದೆ ಒಳಗಿನಿಂದ ಸತ್ತು || ೨ ||
ಬಂದಾಯ್ತು ಮಳೆಯು ಎಷ್ಟೆಷ್ಟೊ ಬಾರಿ ನಂದಿಲ್ಲ ಇದರ ಡಗೆಯು
ಮಣ್ಣಾಗಲೆಂದು ಈ ಬಂಡೆಯೊಂದು ಕೂಗುತಿದೆ ಕೆರಳಿ ಬಗೆಯು || ೩ ||
ಅಂದಿಗಂದಿಗೇ ಸುಡುವ ಹಂಚಿನಲಿ ನೀರು ಬಿದ್ದ ಹಾಗೆ
ಆವಿಯಾಗಿ ಹೋಗಿತ್ತು ತಿಳಿವು ಉಳಿದಿತ್ತು ಬರಿಯ ಬೇಗೆ || ೪ ||
ಅಷ್ಟಾದರೂ ತಂಪು ಒದಗಲೀ ಎಂದು ನೆಲ ಮಳೆಗೆ ಕಾಯ್ದು
ಮತ್ತೆ ಕಾಯುವುದು ಬಾಯಿ ತೆರೆದು ಹಲುಮೊರೆದು ಬೆಂದು ಸುಯ್ದು || ೫ ||
ಎಷ್ಟು ಬಂದರೂ ಇಷ್ಟೆ ಏನೊ ತಿಳಿ ಜಲವು ತಿಳಿಯಲಿಲ್ಲ
ನಿಷ್ಠೆಯಿಂದಲೇ ಕೂಗುತ್ತಿದ್ದರೂ ದೋಷವಳಿಯಲಿಲ್ಲ || ೬ ||
ಬೇಡುವುದು ಬೇರೆ ಬಯಸುವುದು ಬೇರೆ ಉಣ್ಣದಂಥ ಪರಿಯು
ಎಷ್ಟು ತೊಯ್ಸಿದರು ತೊಯ್ಯದಂಥ ಕಾಠಿಣ್ಯ ಕಲ್ಲು ದರಿಯು || ೭ ||
ಎಲ್ಲರೊಳು ಕೂಡಿ ಚೆಲುವಾದ ಬೆಲೆಯ ಪಡೆವಂಥ ಭಾಗ್ಯವಿಲ್ಲ
ಮಣ್ಣಿನೊಳು ಬೆರೆತು ಎಲ್ಲವನು ಮರೆತು ಸಾರ್ಥಕ್ಯ ಪಡೆಯಲಿಲ್ಲ|| ೮ ||
ನೀನು ಮುಟ್ಟಿದರೆ ಕೊರಡು ಕೊನರುವುದು ಕಲ್ಲು ಕರಗುವುದು ಎಂದು
ಕೇಳಿ ತಿಳಿದಿರುವೆ ಆದರೇನು ನೀನೂಲಿಯಬೇಕು ಎಂದು? || ೯ ||
*****