ನಮ್ಮ ವಠಾರದ ಪೂರ್ಣಕುಂಭಾ ಜಂಭಾ
ಕುಳಿತರೆ ಸೋಫಾ ತುಂಬಾ
ಹರಡುವ ಭಾರೀ ನಿತಂಬಾ
ಹುಟ್ಟಿನಲ್ಲೇ ಬೆಂಕಿ ಪೊಟ್ಟಣ
ಉರಿಯಿತು ಒಳಗೇ ಹೊರಗೇ
ಪಟ್ಟಣ ಕೋಣೆ ಕಛೇರಿಗಳೊಳಗೆ
ಹರೆಯದ ಕಿಚ್ಚಿನ ನೂರೆಂಟು ಸಾಕ್ಷಿ
ಇವರು ಶ್ರೀಮತಿ ಮದಿರಾಕ್ಷಿ
ತುಟಿ ಚೂಪು ಮಾಡಿ ಕಿಸಕ್ಕನೆ ನಗುತ್ತಾರೆ
ಕುಣಿಯುತ್ತದೆ ಮಾಂಸ ಅಲ್ಲೀ ಇಲ್ಲೀ
ಕೊಳೆತ ಕ್ಯಾಬೀಜದ ವಾಸನೆ ಬರುತ್ತದೆ
ಗಟಾರದಲ್ಲಿ ಹೊರಳಿದ್ದು
ಅವರೂ ಇವರೂ ಬಾಟಲಿ ಮುಂದೆ ಕುಳಿತು
ಬ್ರಾಂದಿ ಸೋಡಾ ಐಸಿನಂತೆ ಬೆರೆತು
ಬಿಸಿ ಏರುವ ವರೆಗೂ ಆರುವವರೆಗೂ
ಮಾತಾಡಿದರು
ಆಡಿದರು
ಹೊತ್ತೇ ಹೋಗುವುದಿಲ್ಲ
ಗಲ್ಲಿಯ ಸೊಳ್ಳೆಗಳ ಕಿರುಕುಳದಲ್ಲಿ
ತೀಟೆಯ ವಿಚಾರ ಬಂದಾಗ
ಬೀದಿಯ ನಾಯಿಯ ಮರುಕದ ರಾಗ
ಹುಡುಕಿತು ಅನುರಾಗ
ಕೆದಕಿತು ಪರಾಗ
ಎಲ್ಲಾ ದೋಚಿದ ಮೇಲೂ
ಖಾಲಿ ಚೀಲ ಬೋರಲು ಬಿದ್ದು
ಸೂಸುತ್ತಿದೆ ವಠಾರದ ನಾತ
*****