ಸಾಕು ನಿಲ್ಲಿಸು
ನಾಗರಿಕ ಭಾಷೆಯಲ್ಲಿ ಮಾತಾಡು
ಮನುಷ್ಯರ ಹಾಗೆ ಮಾತಾಡು
ಪ್ರತಿಮೆ ಪ್ರತೀಕ ಪ್ರಾಕಾರ ಎಂದು
ಮೇಜಿಕ್ಕು ಕಾವ್ಯ ಗೀಚುತ್ತೀಯಾ
ಆಮೇಲೆ ಲಾಜಿಕ್ಕು ಬೊಗಳುತ್ತೀಯಾ
ಸ್ವಂತ ಗೋಷ್ಟಿಗಳಲ್ಲಿ ಚೇಷ್ಟೆ ಮಾಡುತ್ತೀಯಾ
ಗುಂಪುಗಾರಿಕೆ ನಡೆಸುತ್ತೀಯಾ
ಹೆಚ್ಚು ಹಾರಾಡಬೇಡ
ಟೈಟ್ ಪ್ಯಾಂಟುಧಾರಿ ನವ್ಯದ ಮರಿ-
ತರಕಾರಿ ತೋಟದ ಕ್ರಿಮಿ-ತಕರಾರುಕಾರಿ
ವಿನಾಶಕಾರಿ ದುರಹಂಕಾರಿ ಬೀದಿಭಿಕಾರಿ
ಬೀದಿಯ ಮಧ್ಯೆ ನಿಂತು ಭಾಷಣ ಮಾಡಿ
ಹಳೆ ಹುಲಿಗಳನ್ನು ಇಲಿ ಇಲಿ ಎಂದು ಕೂಗಿ
ಜಗಳಕ್ಕೆ ಕರೆದು ತಮಾಷೆ ನೋಡಿ-
ಅಲ್ಲಾ, ಏನಾಗಿದೆ ನಿನಗೇ ಅಂತ ?
ಸದಾ ಯಾಕೆ ಕಿರಿಕಿರಿ ಮಾಡ್ತೀಯಾ ?
ಸುಮ್ಮನೆ ಪಾಪದವರ ಹಾಗೆ, ಎಲ್ಲರ ಹಾಗೆ
ಇರಬಾರದೇ ನಿನಗೆ ನಾವು ಹೇಳಿದ ಹಾಗೆ ?
ಅಲ್ಲಾ, ಗುಟ್ಟಿನಲ್ಲಿ ಹೇಳಿಬಿಡಪ್ಪಾ;
ಸುಮ್ಮನಿರಬೇಕಾದರೆ ನಿನಗೆ ಏನು ಬೇಕೂಂತ.
*****