ನನಗೆ ಗೋರಿಯ ತೋಡಿ ನಗುತಿರುವ ಬದುಕೇ
ನಗುವ ನಿಲ್ಲಿಸು ನೀನು ಕೆಣಕಬೇಡ
ಬಾಳೆ, ತೆಂಗಿನ ಕಾಯಿ, ಹೂವೆಲ್ಲ ಸಿಂಗರಿಸಿ
ಗೋರಿ ಬದಿಯಲ್ಲಿ ನನಗೆ ಕಾಯಬೇಡ.

ಎಷ್ಟು ಅಡಿ ಉದ್ದವಿದೆ ಎಷ್ಟು ಅಡಿ ಆಳವಿದೆ.
ನೀನು ಅಗೆದಿರುವ ಗೋರಿ ಹೇಳು ಬದುಕೆ
ಎಷ್ಟೆ ಇದ್ದರು ಉದ್ದ, ಎಷ್ಟೆ ಇದ್ದರು ಆಳ
ಮೀರಿ ಬೆಳೆಯುವ ಬಯಕೆ, ತಾಳು ಬದುಕೆ.

ಹುಟ್ಟು ಸಾವಿನ ಮಧ್ಯೆ ಸೇಡು ಯಾತಕೆ ಬದುಕೆ?
ಕೂತು ಮಾತಾಡೋಣ ಬಾ, ಸ್ನೇಹ ಬೆಳೆಸುವ ಬಯಕೆ.
ಹೇಳು ಬದುಕೆ ಗೋರಿಯೊಳಗೆ ಬಂದುಬಿಡಲೆ ಬೇಗ
ನನಗಾಗಿ ತಾನೆ ನೀನು ಮೀಸಲಿಟ್ಟಿರುವ ಜಾಗ.

ಅಲ್ಲಿ ಕೂತು ಕೈ ಚಾಚಿ ಎದೆಬಳ್ಳಿ ಬಿಡಿಸೋಣ ಬದುಕೆ
ಭೂತದ ಬಣವೆಗೆ ಬಿದ್ದ ಉಂಗುರ ಹುಡುಕೋಣ
ಅಂಗುಲಂಗುಲ ಹತ್ತಿರವಾಗುತ್ತ ಎತ್ತರವಾಗೋಣ.
ಅಗೆದ ಗುಂಡಿಯ ಗುಂಡಿಗೆ ಒಡೆದು ರಕ್ತ ಕಾರುವವರೆಗೆ
ಕತ್ತಲ ಹೊದ್ದು ಬೆಳಕಿನ ಬೀಜ ಬಿತ್ತಿ ಬೆಳೆಯೋಣ.

ಈಗ ಹೇಳು ಬದುಕೆ ಎಲ್ಲಿದೆ ನನ್ನ ಪ್ರೀತಿಯ ಗೋರಿ
ಅದರ ಜೊತೆ ಮಾತಾಡುತ್ತೇನೆ; ಮಲಗುತ್ತೇನೆ
ಗೋರಿಯೊಳಗೊಂದು ಗೂಡು ಕಟ್ಟಿ
ಚಿಲಿಪಿಲಿ ಹಾಡುತ್ತೇನೆ.
*****