ಅವರಿಬ್ಬರು ಪ್ರೇಮಿಗಳು. ಜಾತಿಯ ಗೋಡೆ ಮಧ್ಯ ಇತ್ತು. ಹುಡುಗಿ ಮೌನವಾಗಿದ್ದಳು. “ಏಕೆ ಈ ಮೌನ ಮಾತಾಡು” ಎಂದ.
“ನನ್ನಲ್ಲಿ ನೂರು ಧ್ವನಿಗಳು ಪ್ರತಿಧ್ವನಿಸುತ್ತಿವೆ” ಎಂದಳು.
“ನನಗೆ ಕೇಳಿಸಲಿಲ್ಲವಲ್ಲಾ? ಅದು ಯಾರ ಧ್ವನಿಗಳು?”
“ನನ್ನದೇ ಎಂಬಂತೆ ಬೇರೂರಿರುವ ಅಮ್ಮ, ಅಪ್ಪ, ಅಜ್ಜಿ, ತಾತ, ಅಕ್ಕ, ಅಣ್ಣ, ಅತ್ತೆ, ಮಾವ ಮತ್ತೆ ನನ್ನ ಜಗತ್ತಿನಲ್ಲಿ ಇರುವ ಎಲ್ಲಾ ಇತರ ಧ್ವನಿಗಳು” ಎಂದಳು.
“ಎಲ್ಲಾ ಧ್ವನಿಗಳು ಹೇಳುವುದಾರು ಏನು?”
“ಜಾತಿ ಬಾಹಿರವಾಗ ಬೇಡ”
“ನಿನ್ನ ಅಂತರ ಧ್ವನಿ ಹುಡಕಲಾರೆಯಾ? ನಮ್ಮ ಪ್ರೀತಿ ಹೊಸಲಲ್ಲಿ ಹಚ್ಚಿಟ್ಟ ಹಣತೆಯಂತೆ ಒಳಗೆ ಹೊರಗೆ ಬೆಳಗಬಲ್ಲದು ಅಲ್ಲವೇ?” ಎಂದಾಗ ಅವಳ ಹೃದಯದಲ್ಲಿ ಅಂತರ ಧ್ವನಿಯ ಮಂಗಳದ ಗಂಟೆ ಪ್ರತಿಧ್ವನಿಸಿತು.
*****