ನಾನೆ ಮಾಮರ ನಾನೆ ಇಂಚರ
ನಾನೆ ಮುಳ್ಳಿನ ಪಂಜರ
ನಾನೆ ನೂಪುರ ನಾನೆ ಕರ್‍ಪುರ
ನಾನೆ ನಿಗಿನಿಗಿ ನಾಗರ ||೧||

ಎದೆಯ ತೊಟ್ಟಿಲು ಹಾಲು ಬಟ್ಟಲು
ಏಕೆ ಕೋಪದ ಕರಗಸಾ
ನಾನೆ ಸಕ್ಕರೆ ನಗೆಯ ಕೊಕ್ಕರೆ
ಏಕೆ ಕಾಗೆಯ ಕಸಮಸಾ ||೨||

ಚಿಪ್ಪು ಒಡೆಯಲಿ ಚಲುವು ಸಿಡಿಯಲಿ
ಸಾಕು ಕರ್‍ಮದ ಕಟಮಟಾ
ಜಾತಿ ಕೋತಿಯ ಪಾತಿ ಪೈಜಣ
ಜಾರಿ ಹೋಗಲಿ ಲಟಲಟಾ ||೩||

ಕಟ್ಟು ಕಂಕಣ ಮುಟ್ಟು ಮುಂಕಣ
ತಟ್ಟು ಕೊಂಕಣ ಠಂಠಣಾ
ಬದುಕು ಸತ್ಯಾ ಸಾವು ಮಿಥ್ಯಾ
ಆಗು ದೇವನ ರಿಂಗಣಾ ||೪||
*****