ಸಿಗದ ಅನಂತ ಆಕಾಶದೆದುರು
ಸಿಕ್ಕದ್ದು ಒಂದು ಹಿಡಿ ಹೊಟ್ಟು,
ಅದನ್ನೇ ತೊಟ್ಟು
ಕೈಗೆ ಬಳೆಯಾಗಿ ಮುಡಿಗೆ ಹೂವಾಗಿ
ಮರೆದಿದ್ದೇನೆ ನಾಚಿಕೆ ಬಿಟ್ಟು

ನಾಚಿಕೆಯಿಲ್ಲ ನನಗೆ ನಾಚಿಕೆಯಿಲ್ಲ
ಯಾಕೆ, ಇಲ್ಲಿ ಬೇರು ಬಿಟ್ಟು ಬೇರೆಲ್ಲೋ ಹೂ ಚೆಲ್ಲಿದೆನ?
ಸಿಂಹದಂತೆ ಬಂದು ಪೆಟ್ಟು ತಿಂದು ಕತ್ತೆ ಕೂಗಿದೆನ?
ಎರಡವ್ನ ಎಂಟಕ್ಕೆ ಎತ್ತಿ ಏಳರ ತಲೆ ತೆಗೆದೆನ?
ಕೂಗಿನಲ್ಲಿ ವಜಾಹೋಗಿ ಕೆಲಸದಲ್ಲಿ ಜಮಾ ಅಗಿ
ನಾಚಿಕೆ ಯಾಕೆ ನನಗೆ ನಾಚಿಕೆ ಯಾಕೆ?

ಕಲ್ಲುನೆಲ ಸಿಕ್ಕರೇನು ಅದರಲ್ಲಿ
ನಿನ್ನಂಥ ಗುಲಾಬಿ ಬೆಳೆದಿಲ್ಲವ?
ರೂಪ ಧೂಪ ಹರಸಿ ಮೈಗೆ
ಹಸಿರು ಹಾಸಿಗೆ ಇತ್ತಿಲ್ಲವ?
ಗರ್ಭಗುಡಿ ತನಕ ಹೊತ್ತು ನಿನ್ನ
ದೇವರ ತಲೆಗೆ ಏರಿಸಿಲ್ಲವ?

ವ್ಯಾಕರಣದ ಗಡೀಪಾರುಗಳನ್ನ
ವಿಚಿತ್ರ ಲಯಕ್ಕೆ ಹಿಡಿಯುತ್ತ
ಮಾತಿನ ಮಣ್ಣಗೊಂಬೆಗಳನ್ನ
ಅರ್ಥದ ಹೊಳೆಯಲ್ಲಿ ಕರಗಿಸುತ್ತ
ಅನುಭವದ ಸೀರೆ ಕುಪ್ಟಸವನ್ನ
ಧ್ವನಿಮಂಚದಲ್ಲಿ ಸುಲಿಯುತ್ತ
ಪಟ್ಟ ಆನಂದಕ್ಕೇನು ಬೆಲೆಯೇ ಇಲ್ಲವ?
*****