ಪಾಣಿಪತ

(ಒಂದು ಯಕ್ಷಗಾನ ದೃಶ್ಯ)
[ವಾರ್ಧಿಕ ಷಟ್ಪದಿ]

ಜಂಬುದ್ವೀಪದ ಹೊರಗೆ ನೆಲಸಿದ್ದ ಅಫ್ಘಾನ
ರಂ ಬಹಳ ಕಾಲದಿಂದಾಳ್ವಹಮ್ಮದ ಶಹನ್
ಎಂಬಾ ದುರಾಣಿ ಕುಲದಗ್ರಣಿ ಮುಸಲ್ಮಾನರೊಡನೆ ಪಾಣೀಪತಕ್ಕೆ ||
ಜಂಭದಿಂದೆಯ್ತಂದು ಪಾಳೆಯರ ಬಿಟ್ಟಿರಲು
ಕುಂಭಜನ ಚಕ್ರಕೋಟೆಗೆ ನಡೆವ ಅಭಿಮನ್ಯು
ವೆಂಬವೋಲ್ ಮಾರಾಟದಳವೆರಸಿ ಪೊರಮಟ್ಟನಾ ಸದಾಶಿವ ಭಾವುವೂ

[ಸೌರಾಷ್ಟ್ರ ತ್ರಿವಿಡೆ]
ಆ ಸಮರದಲ್ಲಿ ಭಾವು ಓಲಗ
ದಾ ಸಭೆಯ ರಚಿಸಿದನು ಸಿಂಧ್ಯ ವಿ
ಲಾಸಿ ಗಾರ್ಡಿಯ ಹೋಳಕರ ವಿಶ್ವಾಸರಾವೊಡನೆ ||

ಭಾವು:- ಹೊಳೆಯ ಕಳೆದೆವು; ಹೊಳಲು ಹಿಡಿದೆವು;
ತುಳಿದೆವಫ್ಘಾನ್‌ ಸರ್ಪವನು ಇ
ನ್ನುಳಿದು ಹೋದರೆ ಕಚ್ಚದಂದದಿ ತಿಳಿಪುದಿಂದೆನಗೆ ||

[ಭಾಮಿನಿ ಷಟ್ಪದಿ]
ಭಾವುವಿನ ನುಡಿಕೇಳಿ ಮಂತ್ರಿ ಸ
ಭಾವಲಯ ಭಟರಂತರಂಗದ
ಭಾವ ತೋರದೆ, ಓರ್ವರೋರ್ವರ ಮೊಗವ ನೋಡುತಿರೆ; |
ನಾವು ತಳುವುದೊ? ತಳರುವುದೂ? ಮೇಣ್
ಸಾವಿಗಂಜುತ ಹಿಂದುಳಿವುದೋ?
ನೀವು ಯೋಚಿಸಿ ಹೇಳ್ವುದೆಂದನು ಕೈಯಮೀಸೆಯಲಿ |

(ಕಾಂಬೋಧಿ-ಝಂಪೆತಾಳ)
ಹೋಳಕರ:- ದಳವಾಯಿ ಲಾಲಿಪುದು ಹಳಬರ ನುಡಿಯೆಂದು
ಹುಲುಗೆಡಹಿ ಹೊಳೆಯ ದಾಟಿರುವೆ!
ತಲೆಗಟ್ಟಿ ಎಂದು ಕಲ್ಲನು ಹಾಯ್ದೆ ಭಾವುವೇ
ತಿಳಿಗೇಡಿ, ಹೊರ ಕುರುಬನಿಗೆ ಕುರಿಯ ಕೊಟ್ಟೆ |
ಘೋರ ಸೈನ್ಯಗಳಿಂದ ಹೋರದೆ, ಕೆಲಮಂದಿ
ವೀರರಿಂ ಕಾದಾಡಿ ಹಗೆಯಾ
ಮಾರಾಯ ಮೇಲ್ಬಿದ್ದು ಹಾರಿಸುವುದನು ತೊರೆದೆ.
ದೂರ ಸೀಮೆಯು! ದವಸ ಪೂರೈಕೆ ಅಹುದೆ ||

[ಸಾರಂಗ-ಅಷ್ಟತಾಳ]
ಗಾರ್ಡಿ:- ವಂಚನೆಯಲಿ ವೈರಿಯನು ಕೊಲ್ಲಲಾಗದು-ಭಾವು ಕೇಳು-ಒಳ
ಸಂಚಿನ ರಣವಿದ್ಯೆಯನ್ನು ತೋರಲಾಗದು, ಭಾವು ಕೇಳು, ||
ಫ್ರೆಂಚರು ಜಯಲಕ್ಷ್ಮಿ ಸೆಳೆಯುವ ಹಂಚಿಕೆ-ಭಾವು ಕೇಳು-ಸಿಡಿ
ಲ್ಮಿಂಚಿನೊಲ್‌ ಒಮ್ಮೆಯೇ ಬಾಳುತ, ಬಡಿವುದು;- ಭಾವುಕೇಳು, ||

[ಮಾರವಿ-ಏಕತಾಳ]
ಹೋಳಕರ:- ಉದ್ಧತ ಗಾರ್ಡಿ, ಪ್ರಸಿದ್ಧನೆ ನಿನ್ನ ಪ್ರಬುದ್ಧಿಯ ಕಾರಣದಿ,||
ಯುದ್ಧದಿ ನುರಿತೀ ವೃದ್ಧರಿಗಪ್ಪುದೆ ಪದ್ಧತಿ ಇದು ರಣದಿ?||
ಹಿರಿಯರ ಕಲೆಯಿಂ ದೊರಕಿತು ಮಾರಾಟರ ರಾಜ್ಯೋದಯವು||
ಬರುವುದು ಗಾರ್ಡಿಯ ಪರದೇಶದ ಹೊಸ ಹರಿಬದಿ ಅಪಜಯವು||
ಹೊತ್ತಿತು ಕಲಹವು ಕತ್ತಿಯನಿಬ್ಬರು ಎತ್ತಲು ಸಭೆಯಲ್ಲಿ
ಮುತ್ತುಗ ಮುಳ್ಳನು ತೆತ್ತಿಸಿದಂತೆಯೆ ನಿತ್ತನು ದೊರೆ ಆಲ್ಲಿ||

[ವಾರ್ಧಿಕ ಷಟ್ಪದಿ]
ಕಾಳಗಕ್ಕನುವಾಗಿ ಬಂದಿದ್ದ ಭಾವುವಿನ
ಪಾಳೆಯದಿ ಕಚ್ಚಾಟವೆಂಬಂತೆ ಮಲ್ಹಾರಿ
ಹೋಳಕರ ಮಹದಾಜಿ ಸಿಂಧ್ಯದಾಮಾಜಿ ಗಾಯಕವಾಡ ವೀರಗಾರ್ಡಿ ||
ಹಾಳುನೆವ ಹೂಡಿ ಜಗಳಾಡಿ ಕೆಲರೋಡಿದರು
ಮಳವಕೆ ಬಳಿಕಾ ಮರಾಟ ಸೈನ್ಯವನೊತ್ತಿ
ತೂಳಿದುದು ಶಹನಪಡೆ ಗೂಡಿನಲಿ ಸಿಲುಕಿದಿಲಿಯಂತಾದನಾ ಭಾವುವು ||

ಎಳೆ ಅಡಕೆ ಕತ್ತರಿಯ ಬಾಯೊಳಗೆ ಬಿದ್ದಂತೆ
ಮಳೆ ಹೊಯ್ವ ಹೊಯ್ಲಿನಲಿ ಹಸಿ ಮಡಕೆ ಅದ್ದಂತೆ,
ಬೆಳೆಯ ತೆಂಗಿನ ಗಿಡಕೆ ಕಾಡ್ಗಿಚ್ಚು ಹೊದ್ದಂತೆ ರಣರಂಗದಬ್ದಾಲಿಯಾ ||
ದಳದುಳಕ್ಕಿಂಬಾಗಿ ಬಾಗಿ ಬೇಸತ್ತು ಸ
ತ್ತುಳಿದು ತುಳಿದಳವಳಿದು ಕೊಳುಗುಳದೊಳಾ ಭಾವು
ದಳವಾಯಿ ಪಡೆಯೊಡನೆ ಪವಡಿಸಿದ ವೀರ ಶ್ರೀ ಹಾರವಂ ಜೋಗುಳಿಸಲು

[ಮೋಹನ-ಏಕತಾಳ]
ಮಂಗಲಮ ಜಯ ಮಂಗಲಂ ಶುಭ ಮಂಗಲಂ ಜಯ ಮಂಗಲಂ,
ನೆತ್ತರ ಮೂಲಕ ಧರ್ಮವನು-ಹಾ!
ಇಂಬು ಗೊಂಡುದ್ರೇಕದಿಂದ ನಿಂದಿರಲಿತ್ತ.
ಬಿತ್ತರಿಸುವ ದುಷ್ಕರ್ಮವನು ||
ಎತ್ತಲು ಮುಂದಕೆ ಸಲ್ಲದು ಎಂಬೀ
ಉತ್ತಮ ಭೇಧವ ತಂದವಗೆ, ||
ಬಲವಂತರು ತಮ್ಮಯ ಬಲದೆ-ದು
ರ್ಬಲರನು ಕಾಳಗದಲಿ ಕೊಲದೆ, ||
ಒಲಿದವರವರಾತ್ಮೋನ್ನತಿಯನು ಗಳಿ
ಸಲು ಬೇಕನ್ನುತ ಸಾರುವಗೆ ||
ಹಿಂದು ಮುಸಲ್ಮಾನ ಸುನ್ನಿ ಶೇಕ್-ಜೈ
ನಾಂಧ್ರ ಕಿರಿಸ್ತಾನ್ ಫಾರಸಿ ಶೀಕ್ ||
ಇಂದಾ ಐದನೆ ಜೋರ್ಜರ ಕೊಡೆಯಲಿ
ಒಂದಾಗಿರಿಸಿದ ಮಹಿಮನಿಗೆ, ||
ಸನ್ನುತ ಜನತೆ ಪ್ರಮುಖವೆಂದು-ರಾ
ಷ್ಟ್ರೋನ್ನತಿಯೇ ಇಹಸುಖವೆಂದು, ||
ಇನ್ನೀ ಮಂತ್ರವನೆಲ್ಲರು ಪಠಿಸಲಿ
ಎನ್ನುತ ಉಪದೇಶಿಸಿದವಗೆ ||
-ಭಕ್ತಿಸಂದೇಶ
(ರೌದ್ರಿ ಸಂವತ್ಸರ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುರ್‍ವಿನೀತ
Next post ಅನಿರೀಕ್ಷಿತ ಭೇಟಿ

ಸಣ್ಣ ಕತೆ

 • ಜೀವಂತವಾಗಿ…ಸ್ಮಶಾನದಲ್ಲಿ…

  ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

 • ಮುಗ್ಧ

  ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಒಲವೆ ನಮ್ಮ ಬದುಕು

  "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…