ನೆತ್ತರು ಮೆತ್ತಿದ ಹೆಜ್ಜೆ ಗುರುತುಗಳ
ದಾಟಿ ಬರುತ್ತಿದ್ದಾರೆ ದೇಶದ ಅಸಂಖ್ಯಾತ ಮುಗ್ಧರು
ಅನ್ನ-ಆಶ್ರಯ ಕೇಳಿದ ಬಡವರ
ಕೈಯಲ್ಲಿ ಬಂದೂಕು ನೀಡುತ್ತಿದ್ದಾರೆ ಇವರು
ಅಲ್ಲಿಂದ ಬಂದು ವ್ಯಾಪಾರ ಹೂಡಿದ್ದಾನೆ ಠೇಕೇದಾರ
ಗಡಿಯಲ್ಲಿ ಮುದ್ದು ಗುಂಡು ಮಾರುತ್ತಿದ್ದಾರೆ ನೋಡು.
ಮಧುರ ಹಕ್ಕಿಗಳ ಚಿಲಿಪಿಲಿ ಸದ್ದಡಗಿ
ಮದ್ದು ಗುಂಡಿನ ಶಬ್ದಕೆ ಎದೆಯಲಿ ನಡುಕ
ಸರಹದ್ದಿನ ಅಂಕು-ಡೊಂಕಿನ ಗಡಿಗಳಲಿ
ಊರಿನಿಂದ ಸೈನಿಕರು ತಂದ ಬುತ್ತಿಯನು
ಗಡಿಯಾಚೆಗಿನ ಅವರೊಡನೆ ಸವಿದುಣ್ಣುವಾಗ
ಸೂರ್ಯಕಾಂತಿಯ ಮುಖದ ತುಂಬಾ ನಗುನೋಡು
ಗಡಿಯಲ್ಲಿ ಬದುಕು ಅರಳುವದ ಕಂಡು
ನೇಪಥ್ಯದಲ್ಲಿ ಧರ್‍ಮಗಳು ಬಿಕ್ಕುತ್ತಿವೆ ನೋಡು.
ಮಂದಿರ-ಮಸೀದಿಯಲಿ ತ್ರಿಶೂಲ ತಲವಾರ
ಧರ್‍ಮ ಪಹರೆಯಲಿ ಶಸ್ತ್ರ ಸಂಗ್ರಹಣೆ ನೋಡು
ಪವಿತ್ರ ಸ್ಥಳಗಳು ಮದ್ದುಗುಂಡಿನ ಗುಡಾಣಗಳು
ಹಸಿದೊಡಲುಗಳ ಖರೀದಿಸಲು ಹುನ್ನಾರಗಳು.
*****