ಕಲಾವಿದರ ಹಣೆಯಲ್ಲಿ ಮೂರನೆ ಕಣ್ಣೊಂದಿದೆ.
ಚಿಕ್ಕ ಮಣ್ಣಕಣದಲ್ಲೂ
ಬಣ್ಣದ ಕುಂಬಳ ಕಾಣುವ ಈ ವಿಚಿತ್ರ ಕಣ್ಣಿಗೆ
ಚಂದ್ರಮುಖದ ಹಳ್ಳಕೊಳ್ಳ
ಖಂಡಿತ ಕಾಣುತ್ತದೆ.
ಆಳಗಳನ್ನ ಮರೆಸಿ ಬೆಳದಿಂಗಳ ಮೆರೆಸಿ
ನಗುತ್ತ ಬಂದರೆ ಎದುರಿಗೆ ಸುಂದರಿ ಶೂರ್ಪನಖಿ,
ರಾಮಬುದ್ಧಿ ಅದರ ಹೊಂಚ
ಥಟ್ಟನೆ ಕಾಣುತ್ತದೆ,
ಲಕ್ಷ್ಮಣಕ್ರೌರ್‍ಯ, ರೇಗಿ ಮೂಗನೆ ಕೊಯ್ಯುತ್ತದೆ.
ಕೂಡಲೆ
ಧೋ ಎಂದು ದಡಗುಟ್ಟಿ ಸುರಿಯುತ್ತದೆ ಮಳೆ
ಹರಿಯುತ್ತದೆ ಹೊಳೆ
ತೇಲುತ್ತದೆ ಮನೆ ಮಠ ಸಮಸ್ತ ಇಳೆ.
ನಿಂತಾಗ ಆಕಾಶ ಶಾಂತವಾಗಿ ಭೂಮಿ ಹಸುರುಕ್ಕಿ ಹಾಡುತ್ತದೆ.
ಹೀಗೆ ಮಳೆಗಾಲ ಪ್ರತಿವರ್ಷ ಬರುತ್ತದೆ.

ಕಲಾವಿದರ ಎದೆಯಲ್ಲಿ ಒಂಟಿಹಕ್ಕಿ ಕೂತಿದೆ.
ತೆಪ್ಪನೆ ಕೂತ ಹಕ್ಕಿಗೆ
ಥಟ್ಟನೆ ಖುಷಿ ಹತ್ತಿ
ಕೂಗುತ್ತದೆ ಆಗೀಗ ಬಿರಿಯುವಂತೆ ಬೆಟ್ಟದ ನೆತ್ತಿ;
ನಡುಗುತ್ತದ ಕಡಲು
ನಡುಗುತ್ತದೆ ನೆಲದೊಡಲು
ಉಡುಗುತ್ತದೆ ಅವರೆದುರು ಎಲ್ಲ ದನಿ ಎಲ್ಲ ಗುಡುಗು ಸಿಡಿಲು;
ಹಾಕಿ ಮುಚ್ಚಿ ಮಾಡುತ್ತದೆ ಅದರಾಜ್ಞೆಗೆ
ಯಕ್ಷಲೋಕದ ಚಿನ್ನದ ಬಾಗಿಲು;
ಮನೆ ಮಠ ಎಲ್ಲ ತೃಣವಾಗಿ
ಕಾಣದ ಋಣದ ಸನ್ನೆಗೆ ಬಾಗಿ
ಹೊರಡುವ ಇವನ ಕವಿಯುತ್ತದೆ ಮರವೆಯ ಮುಗಿಲು
ಕಟ್ಟಿಕೊಂಡ ಲೋಕಭಾರವನ್ನ
ಕೊಡವಿ ಬಿಡುತ್ತದೆ ಬಗಲು;
ಆ ನಿರಾಸಕ್ತಿಗೆ ಬಾಗದು ಯಾವುದು?
ಬಾಗದೆ ಸಂಸಾರನೊಗದ ಒಂದು ಕೊನೆ ಹೊತ್ತ ಹೆಗಲು?

ಸರಿ, ನೆಪವೆತ್ತಿ
ಧೋ ಎಂದು ದಡಗುಟ್ಟಿ ಸುರಿಯುತ್ತದೆ ಮಳೆ,
ಹರಿಯುತ್ತದೆ ಹೊಳೆ
ತೇಲಿಸುತ್ತ ಮನೆ ಮಠ ಸಮಸ್ತ ಇಳೆ,
ಅಷ್ಟರಲ್ಲಿ
ಹಕ್ಕಿಕೂಗು ಚಿಕ್ಕೆಲೋಕ ಮುಟ್ಟುವಷ್ಟರಲ್ಲಿ
ಲೋಕದ ರಾಕ್ಷಸಕೇಕೆ
ಧಡಾಧಡಿ ನುಗ್ಗಿ
ಕತ್ತಿಗೆ ತೈತುಡುಕುತ್ತದೆ
ಕೊರಳಿಗೆ ಹಾವ ಬಿಗಿಯುತ್ತದೆ;
ಥಟ್ಟನೆ ಎಚ್ಚರಾಗಿ ಬಿಟ್ಟರೆ ಕಣ್ಣು
ಮನೆ ಮಠ ಮಡದಿ
ಮೂಲೆಯಲ್ಲಿ ನಗು ಚಿಮುಕಿಸಿ ನಿಂತಿರುವ ಬೆಳುದಿಂಗಳ ಹಣ್ಣು!
ಕೆಳಗಿಟ್ಟ ಗಂಟು ಮತ್ತೆ ಹಗಲೇರುತ್ತದೆ
ನಗಾರಿ ಭೇರಿ ನುಡಿಯ ತೊಡಗುತ್ತವೆ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)