ಸುಕ್ಕುತೊಗಲಿನ ಮೇಲೆ ಬಿದ್ದ ಬರೆಗಳ ಗುರುತು
ನೀರು ಬತ್ತಿದ ತೊರೆಯ ವಿಕಟಪಾತ್ರ,
ಉಸಿರು ಬಿಗಿಹಿಡಿದು ಗಪಗಪ ತಿಂದ ಕಸಿಮಾವು
ಕೊಟ್ಟ ಸುಖಬಾಧೆಗಳ ಚಿತ್ರಗಣಿತ.

ಚಿನ್ನಿ ಬಾಲಕನಲ್ಲಿ ಸಣ್ಣಗೆ ಕಣ್ಣೊಡೆದ ಬಾಧೆ
ತುರಿಕೆಹಿತ ಮುಖದಲ್ಲಿ ಮೊಳೆತ ಕಡಲೆ,
ಅಂಗಾಂಗದಲ್ಲೆಲ್ಲ ದಂಗೆಕೂಗುವ ಕಿಚ್ಚು
ಕಣ್ಣಿರಿವ ಕಾಂತಿಯ ಕಠಾರಿಬಿಚ್ಚು.

ಭಗದತ್ತ ಮದ್ದಾನೆಯೇರಿ ಬಂದರೆ ಪ್ರಾಣ-
ದೇವರ ಅಹಂಕಾರ ಸೊಕ್ಕಿ ಉರಿದು,
ಕಾದ ಮೈ ಚಿತ್ತ ಕೇದಗೆ ತೋಟದಲಿ ಹೆತ್ತ
ಬೆಂಕಿಬೊಂಬೆಗಳ ಬಿಗಿದಪ್ಟಿ ಹಾದು

ಸಿಕ್ಕ ಗದ್ದೆಯಲಿ ಸಿಕ್ಕದ್ದನೆಲ್ಲವ ಉತ್ತು
ಸತ್ತು ಆವೇಶ ಎರಡು ಕ್ಷಣ ವಿರಾಗಿ;
ಜಾರಿದರು ಜಾರುಬಂಡೆಯ ಮೆಟ್ಟಲನ್ನೇರಿ
ಬರುವ ಹೊತ್ತಿಗೆ ಆಟಕಿಳಿವ ಭೋಗಿ.

ಬಚ್ಚಲಿಗೆ ಹೋದ ಕೆಚ್ಚಿನ ಜೀವ ಬಿಸಿನೀರ
ಮೀಯುತಿದೆ ಒಂದೆ ಸಮ ಹೊರಗೆ ಬರದೆ,
ಪೂಜೆಕೋಣೆಯಲಿ ಅಣಿ ಮಾಡಿಟ್ಟ ಸಾಮಗ್ರಿ
ಕಾಯುತಿದೆ ಕಣ್ಣುಮುಚ್ಚುತಿದೆ ಹಗಲೆ.

ಷಷ್ಟ್ಯಬ್ದಿ ಮಗಿದರೂ ಇಷ್ಟ ಕೊನರುತಿದೆ. ಕಸಿ
ಹಣ್ಣ ಸ್ಮೃತಿಯಲಿ ಸುಯ್ವೆ ಮಧ್ಯಚಿತ್ತ,
ನರೆಗಡ್ಡ ಸುಕ್ಕುಗೆನ್ನೆಯ ನಡುವೆ ಕುಳಿಗಣ್ಣು
ಜಪಿಸುತಿದೆ ಹಸಿರನ್ನು ಹುರಿದ ಬಿತ್ತ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)