ಕಟಗ ರೊಟ್ಟಿಗೆ ಗುಟುಗು ನೀರಿಗೆ
ಕೋತಿ ಕಾಳಗ ನಡೆದಿದೆ
ಹುಳಿತ ಹಿಂಡಿಗೆ ಕೊಳೆತ ಸಾರಿಗೆ
ಹಾವು ಮುಂಗಲಿಯಾಗಿದೆ

ಜಾರಿಬಿದ್ದಾ ಆತ್ಮ ರತುನಾ
ಜಂಗು ರಾಡಿಯ ಅಡರಿತೊ
ದೀಪವಾರಿತೊ ದೀಪ್ತಿ ತೀರಿತೊ
ಬೆಳಗು ಇದ್ದಲಿಯಾಯಿತೊ

ರಕ್ತ ರಾಗಾ ರುಂಡ ಮುಂಡಾ
ಮದ್ದು ಗುಂಡಿನ ಭೋಜನಾ
ಕೊಂದು ಬಾಳುವ ಕೊಂದು ಉಳಿಯುವ
ಆತ್ಮ ಘಾತದ ಯಾತನಾ

ಶಾಂತಿ ತಾಯಿ ಯೋಗ ಮಾಯಿ
ನೋಡು ಮಕ್ಕಳ ಅಟಮಟಾ
ಮುಗ್ಧ ತಲೆಗಳ ಕಿತ್ತು ತಿಂಬುವ
ಮಸಣ ಪಶುಗಳ ವಟವಟಾ
*****