ಬುದ್ದಿ ಇರುವುದೆ ಹೇಳಿ ಇದ್ದಮಾತ್ರಕೆ ಕಾವು
ಈಗೀಗ ಕಣ್ ತೆರೆಯುತಿರುವ ಎಳೆಯರು ನಾವು.
ಹಿರಿಯರೊಡಬೆರೆತು ಅನುಭವವಿಲ್ಲ, ಬೆರೆತೆವೋ
ಅಪಚಾರವಾಯ್ತೆಂಬ ಎಗ್ಗಿಲ್ಲ. ಬಾಲನಡೆ
ಬಲಿತಿಲ್ಲ ಹಸಿರು ಪ್ರಾಯದಲಿ ಜೊತೆ ಬಂದೆವು.
ಸ್ನೇಹಕೂ ಹುಬ್ಬುಗಂಟನು ತರುವ ಸಲಿಗೆಯಲಿ
ಹೇಗೊ ನಡೆದವು, ಏನೊ ಹರಟಿದೆವು, ಮುರುಟಿದೆವು;
ಕುರುಡುಗಣ್ಣಲಿ ಬಿಳುಪು ಕಪ್ಪೆಂದು ಕಿರಿಚಿದೆವು.
ಚಿಗುರುಗೊಂಬಿನ ಕರುವ ಕರೆದು ಗುದ್ದಿಸಿಕೊಳುತ
ನಕ್ಕು ಮುದ್ದಿಸಿ ಒಲವ ಮೆರೆದ ಹಿರಿಯರು ನೀವು.
ಸಪ್ಪೆ ಸಕ್ಕರೆಯೆನುವ ಅಕ್ಕರೆಯ ತೋರಿದಿರಿ;
ಸೆರಗು ಶಲ್ಯವ ಕಟ್ಟಿ ಇಗೊ ಮದುವೆ ಎಂದಿರಿ;
ಸಿಹಿಯಿಟ್ಬು ಹರಿಭೂಮದೂಟ ಹಾಕಿದಿರಿ;
ನಮ್ಮ ಎಳೆಮುಖದಲ್ಲಿ ನಿಮ್ಮ ಪ್ರಾಯದ ಬಿಂಬ
ಹೊಳೆದು ಸುಖಿಸಿದಿರೆಂಬ ತೆರದಿ ನಕ್ಕಿರಿ. ಹಾಡು
ಹಸೆಮಾಡಿ ಹಾರೈಕೆ ಹೊದಿಸಿದಿರಿ, ನೆನಪಿನಲಿ
ಬಾಳೆ ಚಪ್ಪರವೆದ್ದು ಓಲಗದ ಹನಿಸದ್ದು
ಮದ್ದು ಬಾಣಗಳ ಬಣ್ಣದ ಈಟಿ ನಭಕೆದ್ದು
ಇವಳ ಮೊಗದಲಿ ಮತ್ತೆ ವಧುಭಾವ ಮೂಡಿತು
ಕಂಡುಕೇಳದ ಎಳೆಯರನು ಬಳಿಗೆ ಸೆಳೆದು
ಮಮತೆಯಲಿ ಬಿಗಿದಂಥ ತಾಯಿತಂದೆಯರೆ
ತಬ್ಬಲಿತನದ ಭಾವ ಹರಿದೊಗೆದ ಹಿರಿಯರೆ
ನಿಮಗೆ ಮಾಡುವೆವಿದೊ ಸಾಷ್ಟಾಂಗವಂದನೆ.
*****