ಮೂಡಣ ಪಡುವಣ ಕಡಲಿನ ವಡಬನೆ
ನಡು ಬಾನಿನ ವರ ಭಾಸ್ಕರನೆ
ವೀಚೀ ರಂಗಾ ಭುವನ ತರಂಗಾ
ಕೊಂಕಣ ತೆಂಕಣ ಶಾಮಲನೆ

ಗಗನಾಂಗಣ ರವಿ ಎದೆಯಾಂಗಣ ಕವಿ
ಭಾರತಿಯಾತ್ಮದ ಚಿನ್ಮಯನೆ
ಸತ್ಯಾರಾಧನ ಶಾಂತಾಹ್ಲಾದನ
ಹುಯ್ಲಿನ ಕೊಯ್ಲಿನ ವಿಪ್ಲವನೆ

ಓವೋ ಗುರುಹರ ಆತ್ಮಾಂಗಣ ಚಿರ
ಬಾರೈ ತಾರೈ ಋತ್ತತ್ವಾ
ತೂರೈ ತುಳಿಯೈ ಪುಡಿ ಹುಡಿ ಮಾಡೈ
ಭೋಗಾ ರೋಗಾ ರಕ್ತತ್ವಾ

ಬೆಳಗಾಗಲಿ ಇಳೆ ಋಷಿಯಾಗಲಿ ಕಳೆ
ಮಳೆಯಾಗಲಿ ಚಿರ ವರಶಾಂತಿ
ತಬ್ಬಲಿ ಕರುಬಲಿ ನಿಲ್ಲಲಿ ಹುಲಿಯುಲಿ
ಕೇಳಲಿ ಮುಕ್ತಿಯ ಚಿರಪಙ್ತಿ
*****