ಯಾರಿವಳು?
ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು?
ಗಂಡನೆಂಬವನನ್ನ ಕಂಡ ಕಂಡಂತೆಯೇ
ಕಂದ ಎಂಬಂತೆ ಮಮತೆಯಲಿ ಮಾತಾಡುವಳು!
ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ
ಉಡಿಯಲ್ಲಿ ಹಾಕಿ ಶಮಿಸಿದವಳು
ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು ತಟ್ಟಿ
ಹೊಲೆಗಸದ ತೊಟ್ಟಿಯನು ಹೀಗೆ ತೊಳೆದವಳು?

ಇವಳೆ
ಬೆನ್ನ ಬಳಿ ಬಂದು ಕೊರಳಿಗೆ ತೂಗುತಿದ್ದವಳು?
ಕೈಯ ಪುಸ್ತಕವನ್ನು ಕಿತ್ತು ಗೂಡೊಳಗೆಸೆದು
ಸಾಕು ಬಿಡಿ ಸನ್ಯಾಸ ಎಂದು ತೋಳೆಳೆದವಳು!
ಕೆನ್ನೆಯಲಿ ಬೆರಳಿಟ್ಬು
ಕೊರಳ ಸರ ತುಟಿಗಿಟ್ಬು
ಏನೊ ಕಕಮಕ ಹಿಡಿಸಿ ಗೆದ್ದು ನಕ್ಕವಳು?
ಈಗ ಅದೆ ಹುಡುಗಿ
ಬೇಸಿಗೆಯ ಉರಿಗಣ್ಣ
ಬೆಳುದಿಂಗಳಲಿ ತೊಳೆದು
ಗರ್ಭಗುಡಿ ಹಣತೆಯನು ಹಚ್ಚಿರುವಳು ;
ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ
ಜಗದಂಬೆ ಭಾವಕ್ಕೆ ಸಂದಿರುವಳು!

ಒಲೆ ಮೇಲೆ ಅನ್ನ ಸೀಯುತ್ತೆಲಿದೆ ಮೊನ್ನೆ;
ಎದುರಿಗೇ ಕುಳಿತು
ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲೆತ್ತಿ
ನೆಲಕಿಳಿಸಿ ಹರಿಯಬಿಡುತಿದ್ದಾಳೆ, ಒಂದೊಂದೆ !
ಪೊರಕೆ ತುದಿಯಲಿ ಹಿಂದೆ
ಜಿರಲೆಗಳ ಬಡಿದವಳು ಇವಳೆ ?

“ಪಾಪ” ಎಂದರೆ – ‘ಅಹ! ಶುದ್ದ ಕನ್ನಡಿಗ’
ಎ೦ದು ಛೇಡಿಸಿದವಳು!
ಈಗ ಹೊರಳಿದೆ ಕರುಳು,
ಮೊದಲ ಬಾರಿಗೆ ಬಸಿರ ಸವರಿದೆ ಯಶೋದೆಯ
ಬೆಣ್ಣೆ ಬೆರಳು.

ಎಲ್ಲಿ ತಲೆಮರೆಸಿಕೊಂಡುವೊ ಏನೊ ಈಗಿವಳ
ಸಿನಿಮ ಹೋಟೆಲುಗಳಿಗೆ ಅಲೆವ ಚೆಪಲ,
ಆಗೀಗ (ನನ್ನನೂ ಜೊತೆಗೆಳೆದುಕೊಂಡು!)
ದೇವಸ್ಥಾನ ಯಾತ್ರೆಯಷ್ಟೇ ಈಗ ಎಲ್ಲ!
ಮುಡಿತುಂಬ ಹಣೆತುಂಬ ಕೈತುಂಬ ತನ್ನೆಲ್ಲ
ಮಾಂಗಲ್ಯ ಸೌಭಾಗ್ಯ ಮೆರೆಸಿ,
ಶಾಂತಮುಖದೊಳಗೊಂದು ಮರುಳುನಗೆ ನಿಲಿಸಿ,
ಇವಳೀಗ ಕಾರ್ತೀಕದಾಗಸದ ಹಾಡು,
ಕಣ್ಣೊ ಹುಣ್ಣಿಮೆಯಿರುಳ ಕಡಲ ಬೀಡು!

ಜೊತೆಗೆ ನಡೆವಾಗ
ನನ್ನ ಹೆಜ್ಜೆಗು ಹೆಜ್ಜೆ ಮುಂದೆಯಿಟ್ಬು,
ಈಗ? ಎಂಬಂತೆ ಹುಬ್ಬೆತ್ತರಿಸಿ ನಕ್ಕು ಸ್ಪರ್ಧಿಸಿದ್ದವಳು
ಈಗೆಲ್ಲ ಅಬ್ಬರ ಬಿಟ್ಟು
ಕಾಲೆಳೆಯುವಳು ಏಕೊ ತೀರ.
ಕನಸುಗಣ್ಣಿಗೆ ದಾರಿಯಲ್ಲು ಏನೋ ಧ್ಯಾನ,
ಮೈ ಮಾತ್ರ ಇಲ್ಲಿ ಮನಸೆಲ್ಲೊ ಹೊರಟಿದೆ ಯಾನ,
ಅಡಿಗಡಿಗು ಒ೦ದೊ೦ದು ಗುಡಿಕಟ್ಚಿ ಬಾಗಿಲಲಿ
ಹೊರಳಿ ಬೇಡಿದೆ ಮಗುವಿಗಭಯದಾನ.
ಎಲ್ಲ ಬಾಳಲಿ ಎಂಬ ಭಾವ
ಚೆಲ್ಲುತಿದೆ ಕಣ್ಣು, ಅಲುಗಿದೆ ಹೊಟ್ಟೆಯೊಳಗಿರುವ ಪುಟ್ಟ ಜೀವ;
ಗಟ್ಚಿ ಸ್ವಾರ್ಥಕೆ ಈಗ ಮಳೆ ಬಿದ್ದು ಮೈಯೊಡೆದು
ಉಸಿರಾಡುತಿದೆ ಮಣ್ಣ ತೇವ!
*****