ಮಳೆ ಎಂದರೆ ಭರ್ರೆಂದು ಎಲ್ಲಾ ಕೊಚ್ಚಿ
ರೊಚ್ಚಿ ಸೀಳಿ ಹಾಯ್ದು ಹರಿದು
ತಲ್ಲಣಗಳ ಬಂಡಾಟಗಳ ಕಳವಳ
ಸೊಂಯ್ಯ ಎಂದು ಸೆಳೆದು ಸಮುದ್ರ
ಅಲೆಗಳ ಅಬ್ಬರಿಕೆ ಹೆಚ್ಚುವ ಬಿಂದುಗಳು.
ಮಳೆ ಎಂದರೆ ಸಣ್ಣಗೆ ಒಡಲು
ಕಂಪಿಸಿ ಬೀಜಗಳ ಮರ್ಮರ ಎದೆಗೆ
ಹಾಯಿಸಿ ಒಳಗೊಳಗೆ ಕುದಿದ ಕಾವಿಗೆ ಸ್ಪರ್ಶ
ಕೊಟ್ಟು ರೆಂಬೆ ಕೊಂಬೆಗಳ ಬೇರುಗಳಿಗೆ
ಹಸಿರು ಉಸಿರು ಹಾಯಿಸಿದ ಜೀವ ಪದಗಳು
ಮಳೆ ಎಂದರೆ ಭೂಗರ್ಭದ ತುಂಬಿದ
ಜೀವ ಜಲಕೆ, ಮೆಲ್ಲಗೆ ಮುಲಕಾಡುವ
ರಸಚೇತನ ಸುರಿಸಿ ಅಲ್ಲೊಂದು ಹುಟ್ಟು
ಸ್ಪುರಿಸಿ ಮೆದು ಹಾಲು ತುಂಬಿದ ಎದೆ
ಕಾಳುಗಳು ಒಡಲು ತುಂಬಿದ ಸಿರಿ ರಾಗಗಳು.
ಮಳೆ ಎಂದರೆ ತೇಲಿ ತೇಲಿ ಮೋಡಗಳು
ಕನಸು ತುಂಬಿದ ಪಡಸಾಲೆ ಜೋಕಾಲಿ ಜೀಕಿ
ಒಲೆಯ ಮುಂದೆ ಅರಳಿದ ರಂಗೋಲಿ ಕುದಿದ
ಗಂಜೀ ಸುವಾಸನೆ, ಅಂಗಳದಲ್ಲಿ ಬಿದ್ದ ಹೊಂಡಗಳ
ಗುರುತು, ಆತ್ಮಕೆ ಅಮರುವ ತಂಪು ಹನಿಗಳು.
ಮಳೆ ಎಂದರೆ ಇಳಿದ ಬಿಂದುಗಳು
ರಾಗಗಳು ಹನಿಗಳು ಪದಗಳು
ಅವಿರ್ಭವಿಸಿ ಅಂತರಂಗದಲಿ ಮರುಹುಟ್ಟು
ಮೋಡಗಳಾಗಿ ಬದುಕು ಬಯಲ ಬಾನ ತುಂಬಾ
ಹರಡಿ ಹಸಿರಾಗಿ, ನೀಲಿಯಾಗಿ, ಖುಷಿಯಾಗಿ, ಮತ್ತೆ
ಹೊಯ್ಯುವ ಅಮೃತ ವಾಹಿನಿಗಳು.
*****