ಆತ್ಮ ಸಾಕ್ಷಿಯ ನೋಟ ಪ್ರತಿಕೂಟ
ಇಂದ್ರೀಯದೊಳಗೆ ನರನರಗಳ
ಗುಂಟ ಹರಿದ ಆನಂದದ ಜನ್ಮ
ಪ್ರಭಾಪೂರಿತ ಚಲನೆಯ ಗತಿ
ಚಿನ್ನದಂಚಿನ ಮುಗಿಲು ಹೂವು
ನದಿ ಹಾಡಿ ಜುಳು ಜುಳು ಹೊಳೆ
ಹೊಳೆದು ಎದೆಗೆ ಅಮರಿದ ಮಿಂಚು
ಅಮರತ್ವದ ಅನುಭವ ವೈಭವ.

ಎಂತಹ ಆಸೆ ಪಯಣಿಸಲು ನಿನಗೆ
ನನಗೆ ಭವ ಬಂಧನ ಇದ್ದು ಇಲ್ಲದ್ದಾಂಗ
ಬಯಲು ಹಾದಿಗುಂಟ ಹಸಿರು ಹಾಸು
ಹನಿ ಹನಿ ಇಬ್ಬನಿಗಳ ತಂಪಿನ ಹೊತ್ತು
ಅಲ್ಲಿಂದಿಲ್ಲಿಗೆ ಕಾಣುವುದು ದಾಟಿ ಬಂದ ದಾರಿ
ನಡೆದ ಮೋಹ ಹೆಜ್ಜೆಗಳು ಮೂಡಿ
ಮಣ್ಣಗುರುತು ಬಯಕೆ ಚಿಮ್ಮಿ
ಅನಂತತೆಯ ನೆರಳಿಗೆ ಯಾರೂ ರುಜುಹಾಕವುದಿಲ್ಲ.

ದಿವ್ಯ ದರ್ಶನ ದಿವ್ಯ ಭಾವಗಳೊಡಗೂಡಿ .
ಹಕ್ಕಿ ಹಸಿರು ಮಾಡುಗೂಡು
ಮಣಿದ ತಣಿದ ಒಪ್ಪಿಸಿಕೊಂಡ ಒಲವು
ಸಾಕ್ಷಾತ್ಕಾರದಲಿ ಅರಳಿದ ಮೋಡ ಸಿಂಚನ
ಮಳೆ ಹೊಳೆ ಕಳೆ ಕರೆದು ಕರೆದು
ತೊಡವಿಕೆಯಲಿ ಬಾಲ್ಯ ಕಳೆದು ಹೊಳೆದು
ಬೆಳೆದ ಪುನರುಕ್ತಿ ನಡೆದ ನಡುಗೆ
ಓಂ ಭುರ್ಬುಸ್ವಃಹ ಮಿಳಿತಗೊಂಡ ಅರ್ಘ್ಯ.
*****