ನೀನು ನಿಂತ ನೆಲವನ್ನು
ನಂದನವನವೆಂದೂ
ಕೂತ ಬಂಡೆಯನ್ನು
ಐರಾವತವೆಂದೂ
ನಡೆದಾಡಿದ ಭಂಗಿ
ನಟರಾಜನದೆಂದೂ
ಒಪ್ಪಿಕೊಳ್ಳಲು
ನನ್ನಿಂದ ಆಗೊಲ್ಲ.

ನೀನು ಮೋಜಿಗಾಗಿ
ನದಿಯನ್ನು ಈಜಿದ್ದನ್ನು
ಸಮುದ್ರ ದಾಟಿದಷ್ಟು
ಸೋಜಿಗದಿಂದ ನೋಡಲು
ನನ್ನಿಂದ ಆಗೊಲ್ಲ.

ನೀನು ಮೂಸಿದ್ದು
ಮಂದಾರವೆಂದೂ
ಪೂಸಿದ್ದು ಶ್ರೀಗಂಧವೆಂದೂ
ಸಾಬೀತು ಮಾಡಲು
ನನ್ನಿಂದ ಆಗೊಲ್ಲ.

ನೀನು ಗೆರೆ ಎಳೆದದ್ದೆ
ರಂಗೋಲೆಯೆಂದು
ಸುತ್ತಿದ ಸೊನ್ನೆಯೆ
ಸೂರ್ಯನೆಂದು ಸಂಭ್ರಮಿಸಲು
ನನ್ನಿಂದ ಆಗೊಲ್ಲ.

ನಿಜ ಹೇಳಬೇಕೆಂದರೆ
ನನಗೆ ಬೆಳಕಿನ ಬಗ್ಗೆ
ವ್ಯಾಮೋಹವಾಗಲಿ
ಕತ್ತಲೆಯ ಬಗ್ಗೆ ಕನಿಕರವಾಗಲಿ ಇಲ್ಲ.

ನನ್ನ ತೋಟದಲ್ಲಿ
ನೂರಾರು ಬಣ್ಣದ ಹೂಗಳಿವೆ.
ಮಾವಿನ ಮರದ
ಜೊತೆ ಜೊತೆಗೆ
ಬೇವಿನ ಮರಗಳೂ ಇವೆ.
ಹಾಗಲ ಹಾಗೂ ಸಿಹಿಗುಂಬಳ
ಒಂದೇ ಚಪ್ಪರವನ್ನು
ತಬ್ಬಿ ನಿಂತಿವೆ.

ಕೆಲವರನ್ನು ಬೆಟ್ಟ ಹತ್ತಿಸಿದ್ದರೆ
ಅನುರಾಗದಿಂದಲ್ಲ
ಹಲವರನ್ನು ಕಂದಕಕ್ಕೆ
ನೂಕಿದ್ದರೆ ಆಕಸ್ಮಿಕವೂ ಅಲ್ಲ!
*****