ಪ್ರತಿ ಸಂಜೆಯ ಬೆಳಕು ನನ್ನ
ಪುಟ್ಟ ಕೋಣೆಯಿಂದ ಹಾರಿಹೋದ
ಕ್ಷಣ ನೆರಳಿನ ಕತ್ತಲಿನಲಿ ಒಂದು
ಪರಿಚಿತ ಮುಖ ಹುಡುಕುತ್ತೇನೆ.

ಕವಿತೆ ಬೀಜ ಕಟ್ಟುವ ಹೊತ್ತು ತೇಲಿ
ಸಾಗಿವೆ ಬೆಳ್ಳಕ್ಕಿ ಸಾಲು ಸಾಲು ಅಲ್ಲಲ್ಲಿ
ಒಂದೊಂದು ಚಿಕ್ಕಿ ಮಿನುಗಳು
ಅಪರಿಚಿತ ಕಣ್ಣುಗಳು ಹರಿದಾಡುತ್ತವೆ.

ಕಿಟಕಿಯಾಚೆ ಕಾಣುವ ಬೆಟ್ಟದ
ಕೆಂಪು ಹಾಸು ಬಿರಿದ ಕತ್ತಲೆ ಮೌನ
ಅಂತರಿಕ ನೆರಳಿಗೆ ದೀಪ ಹಚ್ಚುತ್ತೇನೆ
ಪಣತಿಯಲಿ ಮಿಡಿದ ಕಂಪನಗಳು

ರಾತ್ರಿಯ ಕತ್ತಲಿನ ಗೋಕುಲದಲ್ಲಿ
ಕೇಳಿಸುವದಿಲ್ಲ ಮುರಳಿಗಾನ ಹೊಳಲು
ಜಾತ್ರೆಯ ಗದ್ದಲದಲಿ ಎಲ್ಲೋ ಕಳೆದಿವೆ
ಪಿಸುಮಾತುಗಳು ಅಲೆಮಾರಿಯಾಗಿವೆ.

ಜಾರಿ ಹೋದ ಬೆಳಕು, ಚಿಕ್ಕಿ, ಕೊಳಲು,
ಪಣತಿ ಕಾಡುವುದು ಯಾರಿಗೂ
ತೋರುವದಿಲ್ಲ, ಹೊನಲುಗಳು ಅಲೆದಾಡುವದಿಲ್ಲ.
ನೀ ಬರದ ಸಂಜೆ ಧೂಳಿನ ಓಣಿಯಲಿ.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)