ಆ ಹಾದಿ ಸಾಗಿದೆಡೆ
ನಡೆದು ಬಿಡು ಮಾನವ
ಇರದು ಹುಡುಕಾಟ
ಹಂಬಲಿಕೆ ನಿನಗೆ

ಕುರುಡ ಮೋಹದ
ಕುದುರೆ ಕೈಕೊಟ್ಟ ಕ್ಷಣವೇ
ಉರಿದು ಬಿದ್ದಿದೆ
ನಿನ್ನ ಆಶೆ ಗೋಪುರ ಬಣವೆ

ಬೊಗಳೆ ಮಾತಿಗೆ ಬಲಿ
ಬೀಳುವುದು ತರವಲ್ಲ
ಸ್ಥಿಮಿತ ಮನಸಿನ ಧೈರ್ಯ
ನಿನಗೆ ಹೊಸತಲ್ಲ

ಎತ್ತ ನೋಡಿದರತ್ತ
ಕುಹಕ ಕರಿಮುಖ ಕಂಡು
ನಡೆಸದಿರು ಹಿನ್ನಡೆಗೆ
ಬದುಕು ದುಸ್ತರವೆಂದು

ಕ್ಷಮಿಸು ದಕ್ಕಿದಾ ದಾರಿ
ಬದುಕು ನೈಜತೆ ತೋರಿ
ತ್ಯಜಿಸು ಅಪರಮಾರ್ಗದ ಕರ್ಮ
ಆರಿತು ಧರ್ಮದಾ ಮರ್ಮ

ಬಯಸಿದ್ದು ಬೇಕೆಂಬ
ಹಠಕ್ಕಿಲ್ಲ ನಾಸ್ತಿ
ಸಿಕ್ಕಪಾಲೆ ಸುಖವೆಂದರೆ
ಬದುಕು ಸ್ವರ್ಗದಾ ಆಸ್ತಿ


ನಾಗರೇಖಾ ಗಾಂವಕರ