ಹೈದರಾಬಾದಿನಲ್ಲಿ ಜೂನ್ ಎಂದೊಡನೆ
ಬೇಕಾದ್ದು ತಳತಳಿಸುವ ಗ್ಲಾಸುಗಳಲ್ಲಿ
ತಂಪು ಪಾನೀಯಗಳ ಸುಖ
ಮಾತಾಡುವುದಕ್ಕೆ ನೋಡುವುದಕ್ಕೆ
ಅವರವರು ಬಯಸುವ ಮುಖ

ಅದೃಷ್ಟವಿದ್ದರೆ ಆಗಾಗ ಸುಳಿಯುವ ಗಾಳಿ
ಆ ಗಾಳಿಯಲ್ಲೆಲ್ಲೋ ತೆರೆಗಳ ತೇವ
ಶಾಖದೊಂದಿಗೆ ಸಮ್ಮಿಳಿಸಿದ್ದು
ಎಷ್ಟೋ ಒಣ ಬಯಲುಗಳನ್ನೂ
ದಂಡೆಗಳನ್ನೂ ಹಾಯ್ದು

ನಾಳೆ ಬರುವುದು ಮಳೆ ಇಂದು ಬರದಿದ್ದರೆ
ಅಥವಾ ನಾಡಿದು, ಮುಂದಿನ ವಾರ
ಬಂದೇ ಬರುವುದಂತೂ ನಿಜ
ಆತನಕ ಹಿಂದಿನ ಪ್ರಣಯದ ನೆನಪು
ಮೂಡುವುದು ಸಹಜ

ಸಂಜೆಯ ದೀಪಗಳನ್ನು ತುಸು ತಡವಾಗಿ
ಹಚ್ಚಿದರೆ ಸಾಲದೆ? ಆಕಾಶದ ಬೆಳಕನ್ನು
ಓಡಿಸಬೇಕು ಯಾಕೆ?
ನಮ್ಮ ದೀಪಗಳು ನಾವೆ-ಪರಸ್ಪರ
ಬೆಳಗುವವರೆಗೆ

ಅಲ್ಲಿದೆ ಈ ಸಂಜೆಯ ವಿಜೃಂಭಣೆಯಲ್ಲಿ
ಎಷ್ಟೊಂದು ದಿವ್ಯ ಮನುಷ್ಯರ ಮುಖ!
ಅಹ! ಏನದು ಕೇಳಿಸಿದ ಸದ್ದು?
ಏನಿಲ್ಲ, ಕಿಟಕಿ ಗಾಜಿನ ಮೇಲೆ ಬಿದ್ದ
ಆಕಸ್ಮಿಕ ಹನಿಯದ್ದು
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)