ಅಲ್ಲಿ ವಿದ್ವತ್ತಿನದೇ ಮೇಲುಗೈ
ದ್ವೈತಕ್ಕೂ ಅಲ್ಲ, ಅದ್ವೈತಕ್ಕೂ ಅಲ್ಲ
ಅಸಲಿಗೆ ದ್ವೈತ ಅದ್ವೈತಗಳೇ
ಇಲ್ಲ, ಎಲ್ಲ ವಿದ್ವತ್ತಿನ ಕರಾಮತ್ತು
ಹೊಸತು ಹುಡುಕುವ ಪರಿ
ಪರಿಪರಿಯಾಗಿ

ಇನ್ನೊಂದೆಡೆ ಕಾಂಚಾಣದ
ಕುಣಿತ
ಸತ್ಯಕ್ಕೂ ಸ್ಥಳವಿಲ್ಲ
ಜ್ಞಾನಕ್ಕೂ ಬೆಲೆಯಿಲ್ಲ
ಸತ್ಯ ಜ್ಞಾನಗಳೆರಡು
ಕಾಂಚಾಣದ ಮಾರುಕಟ್ಟೆಯಲ್ಲಿ
ಇಡಲ್ಪಟ್ಟಿವೆ ಗಿರವಿಗೆ

ಅಲ್ಲೊಂದು ಸೌಂದರ್ಯ ರಾಶಿ
ನೈಜತೆಯೋ, ಕೃತಕತೆಯೋ,
ಅರಿಯದಂತಿರೆ ಅಲಂಕಾರ
ನಟನೆಯೇ ನಿಜವೆಂಬ
ಭ್ರಮೆಯ ಬದುಕು

ಮತ್ತಲ್ಲಿ ಮಠಗಳು ಆಶ್ರಮಗಳು
ಸಭ್ಯಸ್ಥರ ಕೂಟ
ಖಾವಿಬಟ್ಟೆಗಳ ಮೇಲಾಟ

ವಿದ್ಯೆ ಬುದ್ಧಿಗಳ ಆಗರ
ಸಹನೆ ಸಂಯಮಗಳ ಸಾಗರ
ಆದರೂ ಖಾವಿ ಬಟ್ಟೆಯಲ್ಲೂ ಕಾಮಿ
ಅಲ್ಲಿಯೂ ಅಂಟಿದ ರಕ್ತದ ಕಲೆ
ಅನ್ಯಾಯ ಅನಾಚಾರ ವ್ಯಭಿಚಾರಗಳ ಬಲೆ

ಮತ್ತೊಂದು ಕಾಲ ಕಾಯುತ್ತಿದೆ
ವಿಧ್ವಂಸಕರೆ ವಿಧ್ವಾಂಸರಾಗುವರು
ಜಾರೆಯೆಂದರೆ ಗರತಿ
ಸನ್ಯಾಸಿಯೆಂದರೆ ಸಂಸಾರಿ
ಚಾಂಡಾಲನೆ ಗುರುವಾಗುವನು
ಅರ್ಥವಾಗದ
ಮತ್ತೆ ಅರ್ಥೈಸಲಾಗದ
ಆದರೂ ಜಾಣ ಕುರುಡು ನಾಟಕಗಳು
ಎಂಥೆಂಥದೋ ವಿಪರ್ಯಾಸಗಳು


ನಾಗರೇಖಾ ಗಾಂವಕರ