ಕವಿಯ ಹುಚ್ಚು ಮನಸ್ಸು
ಕುಳಿತಲ್ಲಿ ಕೂರುವುದಿಲ್ಲ
ಒಂದು ವಸ್ತುವಿನಿಂದ
ಇನ್ನೊಂದು ವಸ್ತುವಿಗೆ
ನೆಗೆಯುತ್ತಲೇ ಇರುತ್ತದೆ

ಅದು ಉದಾತ್ತವಾಗಲು ಬಯಸುತ್ತಲೇ
ಸಣ್ಣತನವನ್ನೂ ತೋರಿಸುತ್ತದೆ
ತಥಾಗತನ ಧ್ಯಾನದಲ್ಲಿ ಕೂಡ
ಯೋನಿ ಶಿಶ್ನಗಳ ಕುರಿತು
ಯೋಚಿಸುತ್ತದೆ

ಶಬ್ದ ನಿಶ್ಯಬ್ದಗಳ
ಶ್ವಾಸ ನಿಶ್ವಾಸಗಳ
ಬೆನ್ನು ಹತ್ತುತ್ತದೆ
ತೆರೆದ ಕಿಟಕಿಗಳ
ಒಳಗೆ ಹಣಿಕುತ್ತದೆ

ಕಾಣುವ ಸಂಗತಿಗಳನ್ನು
ಕಡೆಗಣಿಸುತ್ತದೆ
ಕಾಣದ ಸಂಗತಿಗಳನ್ನು
ಕಂಡಿದ್ದೇನೆಂದು
ಭ್ರಮಿಸುತ್ತದೆ

ಸರಿ ಸರಿ ಯೋಚಿಸುದದನೆಲ್ಲ
ಬರೆಯಬೇಕಾಗಿಲ್ಲ
ಎಲ್ಲ ಮುಚ್ಚು ಮರೆಗಳನೂ
ತೆರೆದು ಮುಖಕ್ಕೆ
ಹಿಡಿಯಬೇಕಾಗಿಲ್ಲ

ತೋರಿಸು ಆಕಾಶ, ಸಮುದ್ರ.
ಹಿಮಾಲಯ, ಅಚ್ಛೋದ ಸರೋವರ
ನಾಗಾರ್ಜುನ ಸಾಗರ ಅಣೆಕಟ್ಟು
ಕನಾಟ್ ಸರ್ಕಲು
ಶೆರಾಟನ್ ಹೋಟೆಲು

ಒಂದೊಂದು ವಿಚಾರಗಳನ್ನೂ
ಚಿನ್ನದ ನೀರಲ್ಲಿ ಅದ್ದಿ ತೆಗೆ-ಆಗ ಅವು
ಥಳಥಳಿಸುವುವು-ಅವರವರ
ಪ್ರಿಯತಮೆಯರ ಕೊರಳ
ಆಭರಣಗಳಂತೆ

ಜನರು ಆದರಿಸುವರು ಮಹಾ
ದಾರ್ಶನಿಕನೆಂದು ಹೊಗಳುವರು
ಎಲ್ಲರೂ ಕರೆಯುವರು
ಯಾರೂ ತಮ್ಮ ಹೆಂಡಂದಿರನ್ನು
ನಿನ್ನ ಜತೆ ಬಿಡಲು ಹೆದರರು
*****

ತಿರುಮಲೇಶ್ ಕೆ ವಿ

ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ

Latest posts by ತಿರುಮಲೇಶ್ ಕೆ ವಿ (see all)