ಒಂದಲ್ಲ ಒಂದು ದಿನ ನಿನ್ನ
ಕನಸಿನಲ್ಲಿ ಸದ್ದಿಲ್ಲದೆ ಸುಳಿದು
ಬರುವವಳೇ…. ನಾನು
ಜಾಡಿಸಿ ಒದ್ದೋಡಿಸಿದರೆ
ಬಾಗಿಲ ಕಟಕಟಾಯಿಸಿವೆನು.
ನಿನ್ನ ಪೊಗರು ಮಾತೆಲ್ಲ ಗಾಳಿಯಲ್ಲಿ
ತೂರಿ ಹೋಗುವ ಹಾಗೆ ಗೆಜ್ಜೆ-
ಝಣಗುಟ್ಟಿಸುವೆನು, ಕಣ್-
ತಪ್ಪಿಸಿಯಾದರೂ ಒಳನುಗ್ಗುವೆನು.

‘ಹಠಮಾರಿ ಹೆಣ್ಣು’ ಎಂದು
ಅನ್ನುವಿಯಾದರೆ ಅನ್ನು, ಆದರೆ
ಅತ್ತಿಂದಿತ್ತ ಗೋಣಾಡಿಸಿ ಮಾತ್ರ
ತುಂಟ ಕಂಗಳಿಗೆ ಎರಚದಿರು ಮಣ್ಣು,
ದಯವಿಟ್ಟು ದಯೆಯಿಟ್ಟು ದಾರಿಬಿಡು.
ಕೆಣಕದೆ, ಒಳಗೇನಿದೆಯೆಂದು
ಇಣುಕಿ ನೋಡುವೆನು, ಗುಲಾಬಿ
ಮೃದುಪಾದದ ಹೆಜ್ಜೆಯಿಟ್ಟು
ನೋವಾಗದ ಹಾಗೆ ನಡೆದಾಡುವೆನು.
ಖಾಲಿಯೆನಿಸಿದರೆ ಒಂದಿಷ್ಟು
ಹಸಿರ ಬೆಳಸುವೆನು.

ನೋಡು: ನಾಳಿನ ದಿನ ಕಣ್ಣ ಪೊರೆ
ಕಳಚಿ, ನೆನಪು ನಿಚ್ಚಳವಾಗಿ,
ಮಸುಕು ಹೆಜ್ಜೆಯನ್ನಪ್ಪಿ, ನೀ…
ಬಿಕ್ಕಳಿಸುವಾಗ ಸಾವಿರ ಮೈಲುಗಳಾಚೆ
ಸಮಶೃತಿಯಲ್ಲಿ ನುಡಿಯಬಹುದು
ನನ್ನ ಗೆಜ್ಜೆಯ ಗುನುಗು.

ಆಗ: ಬಾಜಾ-ಬಜಂತ್ರಿ ನುಡಿಸಿ
‘ಸುಸ್ವಾಗತ’ ಫಲಕ ತೂಗು ಹಾಕಿದರೂ
ತಿರುಗಿ ನೋಡುವವಳಲ್ಲ ನಾನು.
ಎರಡೂ ಕೈ ಚಾಚಿ ‘ಬಾ’ ಎಂದು
ಕರೆದರೂ ಬರುವವಳಲ್ಲ ನಾನು
ಬರಬೇಕೆನಿಸಿದರೂ ಬರಲಾಗುವುದಿಲ್ಲ ಕೇಳು!
ಹಿಂದಿರುಗಿ ಬರಲಾರದಷ್ಟು ದೂರ
ಹೋದ ಮೇಲೆ ಹೇಗೆ ಬರುವುದು ಹೇಳು?


ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)