ಮೊಳಗಲಿ ಎಲ್ಲೆಡೆ ಕನ್ನಡ ಕಹಳೆ
ಕನ್ನಡ ವಿರೋಧಿ ಸಮರಕ್ಕೆ
ಕನ್ನಡಾಂಬೆಯ ಕ್ಷೇಮವ ಕಾಯುತ
ಕನ್ನಡರಥ ಮುನ್ನಡೆಸೋಕೆ
ಅನ್ನವನುಂಡು ವಿಷವನು ಉಗುಳುವ
ನಿರಭಿಮಾನಿಗಳ ಧಿಕ್ಕರಿಸಿ
ನಾಡಿನ ಏಳ್ಗೆಗೆ ದೀಕ್ಷೆಯ ತೊಟ್ಟ
ಅಭಿಮಾನಿಗಳ ಪುರಸ್ಕರಿಸಿ
ನಡೆಯಲಿ ಕನ್ನಡ ವಿರೋಧಿ ಸಮರ
ಬುವಿಯಲಿ ಅಗಲು ಕನ್ನಡ ಅಮರ
ಎಂದೋ ಏನೋ ನಾಡನು ತಟ್ಟಿದ
ಶತಮಾನಗಳ ಶಾಪಕ್ಕೆ
ಕಂಡೂ ಕಾಣದೆ ಅರೆನಿದ್ರಿಸುತಿಹ
ಕನ್ನಡಿಗರ ಒಳದೋಷಕ್ಕೆ
ಅಂತ್ಯವ ಹಾಡುವ ಬೇಗನೆ ಬನ್ನಿ
ಕನ್ನಡಕ್ಕೆ ನಾವ್ ಮುಡಿಪು ಬನ್ನಿ
ಪಂಪ ರನ್ನ ಸರ್ವಜ್ಞ ದಾಸರ
ಕಾವ್ಯದ ಪಂಜಿನ ಬೆಳಕಲ್ಲಿ
ವೀರವಾಣಿ ಚೆನ್ನಮ್ಮನ ಖಡ್ಗವು
ತೋರಿದ ಮಾರ್ಗವ ಹಿಡಿಯುತಲಿ
ಮುನ್ನುಗ್ಗುವ ನಾವ್ ಶತ್ರುವನಳಿಸಿ
ಮುಗಿಲಿಗೆ ಕನ್ನಡ ಪತಾಕೆ ಹಾರಿಸಿ
*****