ಪರದೇಶಿ ಸಾಗಿಹಳು ಸಂತೆಗಾಡಿಯೊಳು
ಹರಹರಾ ಎಂದೆನುತ ಶಿರಬಾಗಿಸಿದಳು

ಸಂತೆ ಮಾಡಿದ ಯಾವ ಲಕ್ಷಣಗಳಿಲ್ಲ
ಚಿಂತೆ ಮಾಡುತ ಜನರ ಮಧ್ಯೆ ಕುಳಿತಿಹಳು

ತಕ್ಕಡಿ ಸೇರಿಲ್ಲ ಹೊಗೆಪುಡಿಯು ಇಲ್ಲ
ಪಕ್ಕದೊಳು ಕಾಳಿನ ಚೀಲಗಳು ಇಲ್ಲ

ಎಣ್ಣೆ ಡಬ್ಬಗಳಿಲ್ಲ ಗೆಡ್ಡೆ ಗೆಣಸುಗಳಿಲ್ಲ
ಎಲೆಪಿಂಡಿ ಬೆಳ್ಳುಳ್ಳಿ ಈರುಳ್ಳಿ ಇಲ್ಲ

ಸಂಬಾರ ದಿನಸುಗಳ ಕೊಂಡು ತಿಂದಿಲ್ಲ
ಹೊಂಬಾಳೆ ಸಿಗಿಸಿಲ್ಲ ಎಲೆಯಡಕೆ ಇಲ್ಲ

ಬುತ್ತಿ ತಂದವಳಲ್ಲ ಕಡಲೆ ಬುರುಗಿಲ್ಲ
ರಸ್ತಾಳೆ ಕಬ್ಬನು ಕೊಂಡುತಂದಿಲ್ಲ

ರಟ್ಟೆ ಕಡಗಗಳಿಲ್ಲ ತಾಳಿಸರವಿಲ್ಲ
ಪಟ್ಟಿ ನಡುವಿನೊಳಿಲ್ಲ ಓಲೆ ಮೂಗುತಿಯಿಲ್ಲ

ಸಂತೆಗೈದಿಹರೆಲ್ಲ ನೋಡಿ ನಗುತಿಹರು
ಕೊಂತೆಮ್ಮನಿವಳಾರು ನುಡಿಯದಿಹಳೆನುತ

ಯಾರವ್ವ ಯಾವೂರು ಎಲ್ಲಿಗೆಂದೆನುತ
ತಾರವ್ವ ಅಡಕೆಲೆಯ ತತ್ತಿಯೆಂದೆನುತ

ಮಾರಟವೇನವ್ವ ಸಂತೇಲಿ ನಿನದು
ತೌರೂರು ಯಾವೂರು ಸುಣ್ಣ ತಾರೆನುತ

ನಿಮ್ಮೂರ ಕೆರೆಯೊಳಗೆ ನೀರುಂಟೆ ಎನುತ
ಸುಮ್ಮನೆ ಕುಂತವ್ಳೆ ಯಾಕಮ್ಮ ಎನುತ

ಮಕ್ಕಳೈದಾರೇನೆ ಯಜಮಾನನೆಲ್ಲೆ
ಯಕ್ಕ ನಿನ ಎಸ್ರೇನೆ ಮಾತಾಡೆ ಎನುತ

ಕನಿಕರದ ಮಾತುಗಳ ಕೇಳಿ ಪಯಣಿಗಳು
ಜನಕಜೆ ಕಾಣ್ರವ್ವ ಎಂದೊಮ್ಮೆ ನಕ್ಕಳು!
*****