ಅಮ್ಮಾ ನಿನ್ನ ಪುಣ್ಯಚರಣದ ಸಣ್ಣ ಧೂಳಿಯು ನಾನು
ಅಮ್ಮಾ ನಿನ್ನ ಕಣ್ಣ ಕಾಂತಿಯ ಸಣ್ಣ ಕಿರಣವು ನಾನು

ಎಂಥ ಹೆಮ್ಮೆಯೆ ಅಮ್ಮ ನಿನ್ನ ಕಂದ ನಾನಾಗಿರುವುದು
ಸಾಟಿ ಇಲ್ಲದ ಭುವನಮಾತೆ ನನ್ನ ತಾಯಾಗಿರುವುದು

ಇತಿಹಾಸಕೇ ನಿಲುಕದ ಕಾಲಕೂ ನೀ ಪೂರ್ವಳು
ಉಪನಿಷತ್ತಿನ ಮಂತ್ರಗಾಥೆ ನಿನ್ನ ಪ್ರಥರ್ಮೊದ್ಗಾರವು
ಸೀತೆ ಎನ್ನುವ ತಾಳ್ಮೆಗೆ
ದ್ರೌಪದೀ ಸತಿ ಮೇಲ್ಮೆಗೆ
ನಿನ್ನ ಭಾವವೆ ಮೂಲ ಇಲ್ಲಿಯ ನಾರಿಯರ ಘನಕಾಣ್ಕೆಗೆ

ನಿನ್ನ ಜ್ಞಾನದ ಅಲೆಯು ಚಲಿಸಿ ವ್ಯಾಸ ಪಾಣಿನಿ ಬಂದರು
ಬುದ್ಧ ಗಾಂಧಿ ಕರುಣ ಭಾವದ ಸುಧೆಯ ಮೊಗೆದು ತಂದರು
ಕ್ಷಾತ್ರಭಾವಕೆ ಪಾರ್ಥನು
ತ್ಯಾಗಕೆ ಜೀಮೂತನು
ನಿನ್ನ ಪ್ರತಿಗುಣ ಗಣಿಗೆ ಕೋಟಿ ಹೊನ್ನಕಿಡಿಗಳ ಚಲನವು.
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)