ನೂರು ಬಣ್ಣದಲಿ ಊರು ನಗುತಿರಲು
ಗಿರಿಯ ತಪ್ಪಲಲ್ಲಿ
ಬಾಳಿನ ಚೆಲುವನು ಹಸಿರು ಬರೆದಿರಲು
ಬೆಟ್ಟದ ಮೈಯಲ್ಲಿ
ಕೈಯ ಬೀಸಿ ಕರೆಯುತ್ತಿರೆ ಜೀವನ
ಸಾವಿರ ಕೈಗಳಲಿ
ಕಣವೂ ಚಲಿಸದೆ ಕಣ್ಣೇ ಹರಿಸದೆ
ಕುಳಿತನಲ್ಲ ವೀರ
ಯಾರೀ ದಿಟ್ಟ ಫಕೀರ?

ಮಿಂಚು ಸಿಡಿಲು ಮಳೆಗಾಳಿಯ ಜೋರಿಗೆ
ಭೂಮಿಯೆ ನಡುಗಿರಲು
ಮೈಯ ಕೊರೆದು ಚಳಿ ಬಾರಿಸಿ ಬಾಯಿಗೆ
ಪ್ರಾಣವೆ ಹೊಮ್ಮಿರಲು
ಬಾನಿನ ಕುಲುಮೆ ಉರಿಧಗೆ ಕಾರಿ
ಕಲ್ಲೇ ಸಿಡಿದಿರಲು
ತನ್ನೊಳಗನ್ನು ಚಿಂತಿಸುತಲ್ಲೇ
ಕುಳಿತನಲ್ಲ ವೀರ
ಯಾರೀ ದಿಟ್ಟ ಫಕೀರ?

ಶತಶತಮಾನ ಸಹಸ್ರಮುನಿಜನ
ಬಂದು ನಿಂತ ನೆಲೆಗೆ
ದಿನ ದಿನ ಸಾಧನೆ, ಆತ್ಮನಿವೇದನೆ
ನಡೆದ ಅರುಣಗಿರಿಗೆ
ಸಿದ್ಧರ ಬುದ್ಧರ ಅತ್ಮ ಪ್ರಬುದ್ಧರ
ಬೆಳೆದ ತಪದ ನೆಲೆಗೆ
ಮೆಚ್ಚಿ ಸ್ವರ್ಗವೇ ಇಟ್ಟ ಕಿರೀಟ
ಎನಿಸಿ ಕುಳಿತ ವೀರ!
ಯಾರೀ ದಿಟ್ಟ ಫಕೀರ?

ಗೇಣುದ್ದದ ಕೌಪೀನವನುಳಿದು
ಏನೂ ಇರದವನು
ಬಯಸಿದ ಜೀವಕೆ ಮೋಕ್ಷದರಿವನೇ
ಮೌನದಿ ಕೊಡುವವನು
ಹೊಳೆಯುವ ಕಣಿನ ಮಣಿಗಳ ತೂರಿ
ಹೊಮ್ಮುವಾತ್ಮನಿವನು
ನಭದ ತಾರೆಗಳ ರತ್ನಮಾಲೆಗಳ
ಹಾರ ತಳೆದ ವೀರ
ಯಾರೀ ದಿಟ್ಟ ಫಕೀರ?
*****