ತುಂಬಿದ ಕಪ್ಪನೆ ನೇರಿಳೆಯಂತೆ
ಮಿರಿ ಮಿರಿ ಮಿಂಚುವ ಮಗುವೊಂದು
ಚಿಂದಿಯನುಟ್ಟಿದೆ, ಚರಂಡಿ ಬದಿಗೆ
ಮಣ್ಣಾಡುತ್ತಿದೆ ತಾನೊಂದೆ

ದಾರಿಯ ಎರಡೂ ದಿಕ್ಕಿಗೆ ವಾಹನ
ಓಡಿವೆ ಚೀರಿವೆ ಹಾರನ್ನು,
ಮಗುವಿನ ಬದಿಗೇ ಭರ್ರನೆ ಸಾಗಿವೆ
ನೋಡದಂತೆ ಆ ಮಗುವನ್ನು!

ಅರೆ ಕಟ್ಟಿದ ಮನೆ, ಅಲ್ಲೇ ತಾಯಿ
ಕಲ್ಲನು ಹೊರುತಿರಬಹುದೇನೋ!
ರಾತ್ರಿಯ ಕೂಳಿನ ಎರಡೇ ತುತ್ತಿಗೆ
ದುಡಿಯುವ ಕರ್ಮದ ಕಥೆ ಏನೋ !

ಬಗಲಿನ ಮಗುವನು ನೆಲಕ್ಕೆ ಚೆಲ್ಲಿ
ಸೈಜುಗಲ್ಲ ಸೊಂಟದೊಳಿಟ್ಟು
ದುಡಿಯುವ ತಾಯಿ ಹೊಟ್ಟೆಯ ಪಾಡಿಗೆ
ಕರುಳಿನ ಕೂಗನು ಅದುಮಿಟ್ಟು!

ಒಡಲಿನ ಕೂಗಿನ ಅಬ್ಬರ ತಣಿಸಲು
ಸಾಗುವ ಈ ಕರ್ಮದ ಕಥೆಗೆ
ಕೊನಯೇ ಇಲ್ಲವೆ ಕರುಳೂ ಇಲ್ಲವೆ
ಕುಣಿವ ಕುರುಡು ಕಾಂಚಾಣಕ್ಕೆ?
*****