ಹೊಸ ಬಗೆಯಲಿ ಬರಲಿ
ಸುಖ ಸಾವಿರ ತರಲಿ
ಹರಿಸಿ ನಮ್ಮ ಕಣ್ಣ ಕವಿದ ಭ್ರಾಂತಿ
ಮನ್ನಿಸಿ ನಡೆಸಲಿ ಶುಭ ಸಂಕ್ರಾಂತಿ
ತುಳಿದು ಆಳಲಾಗದಂಥ ಬಾಳಿಗೆ
ಹೊನ್ನಿನ ತೋರಣವ ಬಿಗಿದ ನಾಳೆಗೆ
ಹೊಂಬಿಸಿಲಿನ ಹಾದಿಗೆ
ಕೇದಗೆ ಹೂ ಬೀದಿಗೆ
ಮಾತೆಲ್ಲವು ಕೃತಿಯಾಗುವ ಜಾಡಿಗೆ
ಕಣ್ಣೆರಡೂ ಉರಿವ ದೀಪಸ್ತಂಭ
ಮೇಲೆತ್ತಿದ ತೋಳುಗಳೇ ಕಂಬ!
ದೇಹವೆ ಗುಡಿಯಾಗಿ
ನಾಡೇ ಇಡಿಯಾಗಿ
ಸ್ವಾಗತಿಸಿದೆ ಸಂಕ್ರಾಂತಿಯ ಕೂಗಿ
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.