ಹಾಡುವ ಹಕ್ಕಿಗೆ ಹೂವಿನ ರೆಂಬೆ
ಕಂದನ ಕೈಗೆ ಬಣ್ಣದ ಗೊಂಬೆ
ಆಶೀರ್ವದಿಸಲಿ ಈ ಹೊಸ ವರ್ಷ
ಪ್ರಾಯದ ಗಂಡಿಗೆ ಪ್ರೀತಿಯ ರಂಭೆ

ಖಾಲಿ ಆಗಸಕೆ ಕಪ್ಪನೆ ಮೋಡ
ಬೆಂದ ಜೀವಕೆ ಬೆಚ್ಚನೆ ಗೂಡ
ಬಾಗಿನ ನೀಡಲಿ ಈ ಹೊಸ ವರ್ಷ
ಕವಿ ಕಲ್ಪನೆಗೆ ಹೊಸ ಹೊಸ ಹಾಡ

ನಲ್ಲಿಯ ಬಾಯಿಗೆ ನಿಲ್ಲದ ನೀರು
ಹೊತ್ತು ಹೊತ್ತಿಗೆ ತಪ್ಪದೆ ಹಾಲು
ಸಿಗುವಂತಾಗಲಿ ಈ ಹೊಸ ವರ್ಷ
ಬಡವರಿಗೂ ಮೈ ತುಂಬಾ ನೂಲು

ಬಿರಿದ ಭೂಮಿಗೆ ಸುರಿಯುವ ಧಾರೆ
ಮಿರಿ ಮಿರಿ ಮಿಂಚುವ ಗದ್ದೆಯ ಮೋರೆ
ನಾಚಿ ನಗುತಿರುವೆ ಸಿರಿಸಿರಿ ಹೆಣ್ಣಿಗೆ
ಆಗಿಬಿಡಲಿ ಈ ವರ್ಷವೆ ಧಾರೆ.
*****

Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)