ಏನು ಬರೆಯಲಿ ಏನು ಹಾಡಲಿ
ದಿನದ ಕಾವ್ಯಕೆ ಶುಭನುಡಿ,
ನಿತ್ಯದುದಯವು ಬರೆವ ಮುನ್ನುಡಿ
ಪುಟ-ಪುಟಕೂ ನೀಡಲು ಕೆಂಗಿಡಿ,
ನಿಸರ್ಗ ಸಗ್ಗವು ಬೆಂಗಾಡಾಗಿರೆ
ಇನ್ನೆಲ್ಲಿ ಪೂಜೆಯು ಪ್ರಕೃತಿಗೆ,
ಇಂಚರದ ಬಳಗಕೆ ಠಾವೆ ಇರದಿರೆ
ಎಲ್ಲಿನ್ನೆಲ್ಲಿ ಗಾನವು ಕೊಳಲಿಗೆ,
ರಾಯರಳಿದರು ರಾಯತನವು ತಾ ಸಾಗಿರೆ,
ಯಾವ ನೆಲೆಯಿದೆ ಹಸಿವಿನೊಡಲಿಗೆ,
ಧರ್ಮದರ್ಥವು ಅನರ್ಥವಾಗಿರೆ
ಇನ್ನಾವ ಬೆಲೆಯಿದೆ ದೇವ ಪ್ರೀತಿಗೆ….
ಜಗವೆ ಮಾರುವ ಕಟ್ಟೆಯಾಗಿರೆ
ಕೊಡು ಕೊಳ್ಳುವವರೆತ್ತಬಲ್ಲರು ಮಾನ’ವ
ಸರಕು ನೂಪುರ ಗಂಟೆ ಮೊಳಗಿರೆ
ಸುಪ್ರಭಾತವೆಲ್ಲಿಯೋ ಮಾನವ….
*****
ಎನ್ ಎಂ ಗಿರಿಜಾಪತಿಯವರು ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ರಾಮಸಾಗರ ಗ್ರಾಮದವರು.ತಂದೆ ದಿ|| ಎನ್ ಎಂ ಸೋಮಶೇಖರಸ್ವಾಮಿ, ತಾಯಿ ಶ್ರೀಮತಿ ಎನ್ ಎಂ ವಿಶಾಲಾಕ್ಷಮ್ಮ,.ಗಿರಿಜಾಪತಿಯವರು ಎಂ. ಎ., ಬಿ. ಇಡಿ., ಪದವಿ ಪೂರೈಸಿದ್ದು, ಪಿ. ಎಚ್ಡಿ., ವ್ಯಾಸಂಗ ಮಾಡುತ್ತಿದ್ದಾರೆ.
ಮುಂಬೈನ ಬಿ.ಎ.ಎ.ಆರ್.ಸಿ. ಯವರಿಂದ ವಿಜ್ಞಾನ ಪ್ರಬಂಧಕ್ಕೆ ಗೌರವ ಪುರಸ್ಕಾರ. ‘ಮೃತ್ಯು ಸಂಝೀವಿನಿ’ ನಾಟಕ ಹಸ್ತಪ್ರತಿಗೆ ಬೆಂಗಳೂರಿನ ವಿಶ್ವೇಶ್ವರಯ್ಯ ಟೆಕ್ನಿಕಲ್ ಅಂಡ್ ಇಂಡಸ್ಟ್ರಿಯಲ್ ಮ್ಯೂಸಿಯಂನಿಂದ ಗೌರವ ಪುರಸ್ಕಾರ.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪುರಸ್ಕಾರ, ಲಲಿತ ಪ್ರಬಂಧಕ್ಕೆ ಸಂಕ್ರಮಣ ಸಾಹಿತ್ಯ ಗೌರವ ದೊರೆತಿವೆ.
ಕೃತಿಗಳ ವಿವರ:
ಕವನ ಸಂಕಲನ:
ತಾಯಿ ಭಾರತಿ ಸುತೆ ಕನ್ನಡತಿ
ಭಾವನದಿಯ ದಂಡೆಯ ಮೇಲೆ...
ಆಮ್ಲ ಮಳೆ
ಕಥಾ ಸಂಕಲನ:
ನಾವು ನಮ್ಮವರು
ಮಕ್ಕಳ ನಾಟಕ:
ಅಪಾಯದ ಗಂಡೆ
ಸದ್ಭೋದಾಮೃತ ಶತಕ
ಕನ್ನಡ ವ್ಯಾಕರಣ ಮತ್ತು ಭಾಷಾ ರಚನೆ
ವಚನ ರತ್ನತ್ರಯರು
ಕಾವ್ಯ ಪರಿಕರಗಳು
ವಚನ ಚಿಂತಾಮಣಿ
ಕನ್ನಡ ಛಂದಸ್ಸಂಪದ
ಕನ್ನಡ ಛಂದೋದರ್ಪಣ
ಕನ್ನಡ ಭಾಷಾಲೋಕ
ಅಮೃತ ತರಂಗಿಣಿ
ಬೆಳಕಿನ ಹೆಜ್ಜೆಗಳು
ಪ್ರಾಚೀನ ಭಾರತೀಯ ಕಥಾ ಸಾಹಿತ್ಯ
ನಮ್ಮೂರ ಹೋಳಿ ಹಾಡು
*****
Latest posts by ಗಿರಿಜಾಪತಿ ಎಂ ಎನ್
(see all)