ಲಖನೋವಿನಲ್ಲಿ ನಾನು ಲಖನವಿ ಕುರ್ತ ಧರಿಸಿದೆನು
ಅತಿ ತೆಳ್ಳಗಿನ ಒಂದು ಜತೆ ಚಪ್ಪಲಿಯ ಮಟ್ಟಿದೆನು
ಮತ್ತೆ ಗಡ್ಡವೂ ಬೆಳೆದಿತ್ತು, ಅಲ್ಲಲ್ಲಿ ಬಿಳಿಯಾಗಿತ್ತು,
ಇಡಿಯ ಹಜರತ್‌ಗಂಜ್ ನನ್ನ ಕಾಯುವಂತಿತ್ತು
ಮೆಟ್ಟು ಮೆಟ್ಟಲಿಗೆ ಅಂಗಡಿ ಬಾಗಿಲುಗಳು ತೆರೆದು
ಬೀಸುಗಾಳಿಗೆ ಮುಖದ ಅವಗುಂಠನವೂ ಸರಿದು
ಮದಿರೆಯ ಮದಿರಾಕ್ಷಿಯೆ ಅಫಘಾನದ ದ್ರಾಕ್ಷಿಯೆ
ಎಲ್ಲಿಂದ ಬಂದ ಕಾಣಿಕೆಯಿದು ಹೇಳೆಲೆ ಭಕ್ಷಿಯೆ

ಯಾರೀತ ಗಡ್ಡಕ್ಕೆ ಬಂಗಾರದ ಬಣ್ಣ ಹಚ್ಚಿದವನು
ಹಣೆಯಲ್ಲಿ ನಿತ್ಯವೂ ನಮಾಜಿನ ಹಚ್ಚೆಯುಳ್ಳವನು
ಬಡಾ ಇಮಾಮನೊ ಅಥವ ಛೋಟಾ ಇಮಾಮನೊ
ಅಥವ ಅರಬನಿಗೆ ಹೆಣ್ಣು ಕೊಡಲಿರುವ ಮಾಮನೊ
ಏನನರಸುವನಿವನು ಇಂಥ ಇಳಿಹೊತ್ತಿನಲ್ಲಿ
ಆಚೀಚೆ ಸಾಗುವವರ ನಿರಾಸಕ್ತ ಕಣ್ಣುಗಳಲಿ
ಅರಸುವನೆ ಅಳಿದ ಅರಸೊತ್ತಿಗೆಯ ನೆನಪುಗಳ
ಅಥವ ಹೊತ್ತಾದರೂ ಮನೆಗೆ ಬರೆದಿರುವ ಮಗಳ

ಸುಳಿಸುಳಿಯುತಿತ್ತೊಂದು ಲಘು ಅತ್ತರಿನ ಸುವಾಸ
ತಿರುತಿರುವಿನಲ್ಲು ಯಾರೊ ಮರೆಯಾದಂತೆ ಭಾಸ
ಕುಣಿಯುತಿದ್ದುವು ಸಾಲುಗಂಭಗಳಲ್ಲಿ ಸಂಜೆಯ ದೀಪ
ಮರುಕಳಿಸುತಿತ್ತು ಕಾರಣವ ಮರೆತ ಶಾಪ
ನಾನಾರು ಯಾವ ಶತಮಾನದವನು ಇದಾವ ಕಾಲ
ಮೆಟ್ಟಿ ನಿಂತಿರುವುದು ಹಿಂದೆ ಯಾರು ಆಕ್ರಮಿಸಿದ ನೆಲ
ಬೆಚ್ಚದಿರು ಮನವೆ ಕುದುರೆಗಳ ಖುರಪುಟವ ಕೇಳಿ
ಅದು ಕೇವಲ ಒಣ ಧೂಳನೆಬ್ಬಿಸುವ ಬಿರುಗಾಳಿ

ಕಿಟಕಿ ಕನ್ನಡಿಯೊಳಗೆ ನೋಡಿಕೊಂಡೆನು ನನ್ನ ನಾನು
ಪ್ರತಿಬಿಂಬ ಕೇಳಿತು: ಗುರುತು ಹತ್ತಿತೇನು ?
ಹತ್ತಿತೆನಲೆ ಇಲ್ಲಿವೆನಲೆ ಉತ್ತರ ತಿಳಿಯಲಿಲ್ಲ
ಬಹಳ ಹೊತ್ತಿನಿಂದಲೂ ಹೀಗೆ ನಡೆದಿದ್ದೆನಲ್ಲ
ಹಸಿದಿತ್ತು, ಹೊಟ್ಟೆ ಕೊಳೆಯಾಗಿತ್ತು ಉಟ್ಟ ಬಟ್ಟೆ
ಉತ್ತರವಿಮುಖನಾಗಿ ಇದೊ ಇದೋ ಹೊರಟೆ
ಅಪರಿಚಿತ ಮಾರ್ಗದಲಿ ಪರಿಚಯಕೆ ಭಯಗೊಂಡು
ತಡೆಯದಿರಲೆಂದು ಯಾರೂ ಫಕ್ಕನೆ ನನ್ನ ಕಂಡು

ಎಲ್ಲವನು ಬಲ್ಲವನು ಸುಲ್ತಾನ ಆಸಿಫ್ ಉದ್ದೌಲ
ಕ್ಷಾಮ ದಾಮರ ಯುದ್ಧ ರೋಗ ರುಜಿನುಗಳನೆಲ್ಲ
ಎಲ್ಲರೂ ಮಲಗಿರುವ ವೇಳೆ ಅರಮನೆಯ ಏಕಾಂತದಲಿ
ಹುಟ್ಟು ಸಾವುಗಳೆದ್ದು ಅವನ ಕಣ್ಣ ರೆಪ್ಪೆಗಳಲಿ
ಕುಣಿಯುತಿದ್ದುವು ಕೂಗುತಿದ್ದುವು ಮನೆ ಮನೆಯ
ಕದ ತಟ್ಟುತಿದ್ದುವು ಹುಡುಕುತಿದ್ದುವು ಕತ್ತಲ ಹೃದಯ
ಎಲ್ಲವನು ನೋಡುವನು ಆಸಿಫ್ ಉದ್ದೌಲ ತಳದಿಂದ
ಇಮಾಂ ಬಾರಾದೊಳಗೆ ಹುಗಿದ ಗೋರಿಯಿಂದ

ಕರಡಿಮುಖದ ಭಯ್ಯ! ಇದು ಭೂಲ್‌ಬುಲಯ್ಯ
ಒಮ್ಮೆ ಒಳಹೊಕ್ಕವರು ಹೊರಗೆ ಬರಲಾರರಯ್ಯ
ಒಂದು ಗುಹೆಯಿಂದ ಹುಟ್ಟಿಕೊಳ್ಳುವುದು ಇನ್ನೊಂದು
ನಡೆವ ಪಾದಗಳು ಸುತ್ತಿ ತಿರುಗುವುವು ಹಿಂದು ಮುಂದು
ಒಮ್ಮೆ ಕೂಗಿದ ಸದ್ದು ಕೇಳಿಸುವುದು ಅನೇಕ ದಿನಗಳವರೆಗೆ
ಎದ್ದ ಸ್ವಂತದ ನೆರಳೆ ಕವಿಯುವುದು ಕತ್ತಲ ಹಾಗೆ
ಪ್ರತಿಯೊಬ್ಬರೂ ಹುಡುಕುವರು ತಮ್ಮ ಕಾಣದ ವಿಧಿಯ
ಯಾವ ಬಾಗಿಲೋ ಮುಚ್ಚಿಟ್ಟ ಬೆಳಕಿನ ನಿಧಿಯ

ಒಂದು ಕನಸಿನ ಬೆನ್ನು ಹತ್ತಿ ಹೊರಟವರೆಷ್ಟೋ ಜನ
ಪೀಳಿಗೆಯಿಂದ ಪೀಳಿಗೆಗೆ ಸಾಗುವುದು ಶತಮಾನ
ಕಂಭಗಳ ನಿಲ್ಲಿಸಿದರು ಕೋಟೆಗಳ ಕಟ್ಟಿಸಿದರು
ಸುಳಿದಾಡುವುದಿಲ್ಲಿ ಇನ್ನೂ ಹಲವರ ನಿಟ್ಟುಸಿರು
ಇಲ್ಲೊಬ್ಬ ಬಡಪಾಯಿ ಅಲ್ಲೊಬ್ಬ ದಂಗೆಯೆದ್ದ ಸಿಪಾಯಿ
ಎಲ್ಲ ಮಕ್ಕಳನೂ ಕಳಕೊಂಡ ನಿರ್ಗತಿಕ ತಾಯಿ
ಸಾಧ್ಯವಿದ್ದರೆ ನಾನು ಕರೆಯದಿರುತಿದ್ದೆನೆ
ಕರೆದೆಲ್ಲರ ಕಣ್ಣೀರ ತೊಡೆಯದಿರುತಿದ್ದೆನೆ

ಹೇಳು ವಿಭ! ಎಲ್ಲಿಂದ ಬಂದೆ ನೀ ಯಾರ ಹುಡುಕಿ
ಯಾರಿಗೂ ಕಾಣಿಸದೆ ತೆರೆದು ಮಾಯಾ ಕಿಟಕಿ
ಸುಳಿಯುತಿದೆ ಬಳಿ ಆಹಾ ಎಂಥ ಹಿತವಾದ ಗಾಳಿ
ಹೊರಳಿತೆಲ್ಲಿಗೆ ಪ್ರಜ್ಞೆ ಯಾವ ಕಾಲಕೆ ಮರಳಿ
ಕೇಳಿಸುವುದು ಹರಿವ ಸದ್ದು ಗೋಮತೀ ನದಿ
ಎಷ್ಟೊ ಚಂದ್ರನ ತುಣುಕುಗಳು ಅದರ ತಳದಿ
ಹೇಳು! ಅಪರೂಪದ ಚೆಲುವೆ ಬೆಳಕಿನ ಕಿರಣವೆ
ಎತ್ತ ಕರೆದೊಯ್ಯುತಿರುವೆ ಓ ನನ್ನ ಅವಧವೆ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)