ನೆಮ್ಮದಿಗೆ ಅವಳು ಹಾಕಿದ
ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ.
ವಿನಂತಿ ಪತ್ರದ ಒಕ್ಕಣಿಕೆ ಒಂದು ಚೂರು ಸರಿಯಾಗಿಲ್ಲ,
ಎಲ್ಲಿಯೂ ಒಂದನ್ನು ಕಾಳಜಿಯಿಂದ ಪೂರ್ಣಗೊಳಿಸಿಲ್ಲ,
ಚಿತ್ತುಕಾಟು, ತಿದ್ದುಪಡಿಗಳಿದ್ದರೆ ಪರಿಗಣಿಸಲಾಗುವುದಿಲ್ಲ
-ಎಂಬುದು ತಲಾಟಿಯ ತಕರಾರು.

ಪತ್ರದಲ್ಲಷ್ಟೇ ಪ್ರಮಾದಗೊಂಡಿದೆ ಎಂದರೆ
ಅದು ಸುಳ್ಳೆ ಸುಳ್ಳು:
ಯಾಕೆಂದರೆ ಬದುಕಿನ ಪಾತ್ರಗಳೆಲ್ಲ
ಅದಲು ಬದಲಾಗಿವೆ. ಪಾತ್ರದ ಚಹರೆಗಳು ಕೂಡ
ಗುರುತೆ ಸಿಗದಷ್ಟು ಮಾರ್ಪಾಟಾಗಿವೆ.
ಅದರಲ್ಲಿ ಒಂದು ಅವಳದೂ..

ಅಂದೆಲ್ಲಾ ತಂಬೆಲರಿಗೆ ತೀಡಿಕೊಂಡ
ಎಳೆತಳಿರಂತೆ- ಮೋಹಕತೆಗೆ ಮರುಳಾಗಿ,
ಪರಸ್ಪರ ಮುಟ್ಟಗೊಡದೇ, ಪರಿಪರಿಯ ಭಾವದೋಕುಳಿಯಾಗುತ್ತ
ಹೊಂಬಾಳಿನ ಹಂಬಲವ ಮೈತುಂಬಾ ಹೊದ್ದು,
ಆ ತುಡಿತದಲ್ಲೇ ತವಕಿಸುತ್ತ ಕೂಗಳತೆಗೆ ಸಿಗದವನ ದಾರಿ ಕಾಯುತ್ತ-
ಇಲ್ಲ ಮುಟ್ಟಲೇ ಇಲ್ಲ ಕೂಗು,
ಹಾಗಾಗೇ ಪಾತ್ರ ಪಲ್ಲಟ.

ಆ ಪ್ರೀತಿಯ ಬೇಲಿ ಕೂಡ ಪರಭಾರೆ ವಹಿಸಿಕೊಂಡಿದೆ.
ಯಾರದೋ ಗರ್ಭಕ್ಕೆ ವೀರ್‍ಯದಾನಿಯಾಗಿ, ಆದರ್ಶ ಪತಿಯಾಗಿ,
ಅಪ್ಪಟ ತಂದೆಯಾಗಿ,
ಹಾಗಾಗೇ ಈಗ ವಾಸ್ತವದ ನೆರಳಲ್ಲಿ
ಅರ್ಜಿಯ ಮಂಜೂರಿ ಮಾಡಿಸಿಕೊಳ್ಳುವ
ತುರಾತುರಿಯಲ್ಲಿದ್ದಾಳೆ ಆಕೆ.
ನಾಲ್ಕಾರು ಬಾರು ಅಲೆದಾಡಿ ಅವರಿವರ ಬುದ್ದಿವಾದಕ್ಕೆ ಕಿವಿಕೊಟ್ಟು
ಅಸಂಬದ್ಧವನ್ನೆಲ್ಲಾ ನಿವಾರಿಸಿ,
ತಿದ್ದುಪಡಿಗಳನ್ನೆಲ್ಲಾ ಕಾಣದಂತೆ ಬಿಳಿ ಲೇಪನ ಬಳಿದು
ಮೇಲೆ ನಾಜೂಕಾಗಿ ಹೊಸ ಅಕ್ಷರ ಮೂಡಿಸುತ್ತಿದ್ಧಾಳೆ ಆಕೆ.
*****

ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)